ಸ್ಪೆಷಲ್ ಜ್ಯೂರಿ ಅವಾರ್ಡ್ ನ್ನು ಶಂಕರ್ ನಾಗ್ ಗೆ ಅರ್ಪಿಸಿದ ರಿಷಬ್ ಶೆಟ್ಟಿ
ಬುಧವಾರ, 29 ನವೆಂಬರ್ 2023 (08:40 IST)
Photo Courtesy: Twitter
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಗೋವಾದಲ್ಲಿ ನಡೆದ 54 ನೇ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ಸಿಕ್ಕಿದೆ.
ಈ ಪ್ರಶಸ್ತಿಯನ್ನು ಅವರು ತಮ್ಮ ನೆಚ್ಚಿನ ನಿರ್ದೇಶಕ, ನಟ ಶಂಕರ್ ನಾಗ್ ಗೆ ಅರ್ಪಿಸಿದ್ದಾರೆ. ಈ ಖುಷಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ರಿಷಬ್ ತಮಗೆ ಸಿಕ್ಕ ಪ್ರಶಸ್ತಿಯನ್ನು ಶಂಕರ್ ನಾಗ್ ಗೆ ಅರ್ಪಿಸುವುದಾಗಿ ಹೇಳಿದ್ದಾರೆ.
1979 ರಲ್ಲಿ ನನ್ನ ಸ್ಪೂರ್ತಿಯಾದ ಶಂಕರ್ ನಾಗ್ ಸರ್ ಗೆ ಒಂದಾನೊಂದು ಕಾಲದಲ್ಲಿ ಚಿತ್ರಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿದ್ದು, ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತದ್ದು ಅತ್ಯಂತ ಸಂತೋಷ ತಂದಿದೆ. ಕಾಂತಾರವನ್ನು ಬೆಂಬಲಿಸಿ ನೋಡಿ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡಿಗರು, ಇದೀಗ ಕಾಂತಾರ ಅಧ್ಯಾಯ 1 ಕ್ಕೂ ನೀಡುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ಧಾರಿಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಉತ್ತಮವಾದ ಚಿತ್ರ ನೀಡಲು ಪ್ರಯತ್ನಿಸುತ್ತೇನೆ. ಈ ನನ್ನ ಎಲ್ಲಾ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣರಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಅಭಾರಿ, ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ರಿಷಬ್ ಬರೆದುಕೊಂಡಿದ್ದಾರೆ.
ಶಂಕರ್ ನಾಗ್ ತಮಗೆ ಸ್ಪೂರ್ತಿ ಎಂದು ರಿಷಬ್ ಅನೇಕ ಬಾರಿ ಹೇಳಿಕೊಂಡಿದ್ದರು. ಇದೀಗ ತಮಗೆ ಸಿಕ್ಕ ವಿಶೇಷ ಪ್ರಶಸ್ತಿಯನ್ನೂ ತಮ್ಮ ಮೆಚ್ಚಿನ ನಟನಿಗೆ ಅರ್ಪಿಸಿರುವುದು ವಿಶೇಷ.