ರಾಜ್ಯದಲ್ಲಿ ಮಾತ್ರ ಯಾಕಿಲ್ಲ 100% ಥಿಯೇಟರ್ ತೆರವು? ಸಿನಿಲೋಕ ಆಕ್ರೋಶ
ಬುಧವಾರ, 3 ಫೆಬ್ರವರಿ 2021 (10:38 IST)
ಬೆಂಗಳೂರು: ಕೊರೋನಾ ಕಡಿಮೆಯಾಗುತ್ತಾ ಬಂದಿದ್ದು, ಕೇಂದ್ರ ಸರ್ಕಾರವೇ ಥಿಯೇಟರ್ ಗಳಲ್ಲಿ ಶೇ. 100 ಪ್ರೇಕ್ಷಕರ ಉಪಸ್ಥಿತಿಗೆ ಹಸಿರು ನಿಶಾನೆ ತೋರಿದರೂ ಕರ್ನಾಟಕ ಸರ್ಕಾರ ಮಾತ್ರ ಇನ್ನೂ ಶೇ.50 ಮಂದಿಗೆ ಮಾತ್ರ ಅವಕಾಶ ನೀಡಿರುವುದು ಸಿನಿ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೋನಾ ನೆಪದಲ್ಲಿ ಫೆಬ್ರವರ 28 ರವರೆಗೂ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ಎಂಬ ನಿಯಮ ಮುಂದುವರಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಇದು ಥಿಯೇಟರ್ ಮಾಲಿಕರ, ನಿರ್ಮಾಪಕರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲಾ ರಂಗದಂತೆ ಕೊರೋನಾದಿಂದಾಗಿ ಚಿತ್ರರಂಗಕ್ಕೂ ಭಾರೀ ಹೊಡೆತ ಬಿದ್ದಿದೆ. ನಮಗೂ ಚೇತರಿಸಲು ಅವಕಾಶ ಕೊಡಿ. ಸರ್ಕಾರದ ಇಂತಹ ತಪ್ಪು ನಿಮಯದಿಂದಾಗಿ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ಹೀಗೆ ಮಾಡುವ ಬದಲು ಚಿತ್ರೋದ್ಯಮ ಮುಚ್ಚಿಸಿ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಕಿಡಿ ಕಾರಿದ್ದಾರೆ. ಹಲವು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದ್ದು, ಥಿಯೇಟರ್ ಭರ್ತಿ ಪ್ರೇಕ್ಷಕರನ್ನು ತುಂಬಲು ಅವಕಾಶ ಕೊಡದೇ ಇದ್ದರೆ ನಿರ್ಮಾಪಕರ ಗತಿ ಏನಾಗಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.