ಬೆಂಗಳೂರು: ದೊಡ್ಮನೆಯ ದೊಡ್ಡ ಕುಡಿ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನ. ಡಾ. ರಾಜ್ ಕುಟುಂಬದ ಹೆಮ್ಮೆಯ ಮಗನಿಗೆ ಇಂದು 62 ವರ್ಷ ತುಂಬುತ್ತಿದೆ. ಅವರಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಯುತ್ತಿದ್ದಾರೆ.
ವರನಟ ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಹಿರಿಯ ಪುತ್ರ ಶಿವಣ್ಣ. ಡಾ ರಾಜ್ ಕುಟುಂಬದಿಂದ ಹೆಚ್ಚಿನವರೂ ಬಣ್ಣದ ಲೋಕಕ್ಕೆ ಕಾಲಿಟ್ಟವರೇ. ಡಾ ರಾಜ್ ಕುಮಾರ್ ಮಕ್ಕಳಲ್ಲಿ ಮೊದಲು ಚಿತ್ರರಂಗಕ್ಕೆ ಕಾಲಿಟ್ಟವರು ಶಿವಣ್ಣ. 1974 ರಲ್ಲಿ ಬಾಲ್ಯ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ತಮ್ಮ ಪದವಿ ಶಿಕ್ಷಣ ಮುಗಿಸಿ 1986 ರಲ್ಲಿ ಆನಂದ್ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು.
ಆದರೆ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿಡುವ ಮೊದಲು ಪಾರ್ವತಮ್ಮ ರಾಜ್ ಕುಮಾರ್ ಅವರು ಒಂದು ಕಂಡೀಷನ್ ಹಾಕಿದ್ದರಂತೆ. ಅದಾಗಲೇ ತಂದೆ-ತಾಯಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಿಂದ ಶಿವರಾಜ್ ಕುಮಾರ್ ಗೂ ಸಿನಿಮಾ ಸೆಳೆತವಿತ್ತು. ಆದರೆ ಸಿನಿಮಾಗೆ ಕಾಲಿಡುವ ಮೊದಲು ಮದುವೆಯಾಗಬೇಕು ಎಂದು ಷರತ್ತು ಹಾಕಿದ್ದರಂತೆ ಪಾರ್ವತಮ್ಮ.
ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಲೆ ಮಕ್ಕಳು ಹಾದಿ ತಪ್ಪಬಾರದು ಎಂದು ಪಾರ್ವತಮ್ಮ ರಾಜ್ ಕುಮಾರ್ ಮದುವೆ ಮಾಡಿಸಿಯೇ ಅವರನ್ನು ಚಿತ್ರರಂಗಕ್ಕೆ ಕರೆತಂದಿದ್ದರು. ಅದರಂತೆ 1986 ರಲ್ಲಿ ಶಿವ ರಾಜ್ ಕುಮಾರ್ ರಾಜಕೀಯ ಧುರೀಣ ಬಂಗಾರಪ್ಪನವರ ಪುತ್ರಿ ಗೀತಾ ಜೊತೆ ಮದುವೆ ಮಾಡಿಸಿದ್ದರು. ಇದುವರೆಗೆ ಚಿತ್ರಗಂದಲ್ಲಿ ಶಿವಣ್ಣ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದು ಇದೆ. ಆದರೆ ಒಮ್ಮೆಯೂ ವಿವಾದ ಮಾಡಿಕೊಂಡವರಲ್ಲ. ಆ ಮೂಲಕ ದೊಡ್ಮನೆಯ ಹೆಸರು ಉಳಿಸಿಕೊಂಡಿದ್ದಾರೆ.