ಬೆಂಗಳೂರು: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಬರೋಬ್ಬರಿ 38 ವರ್ಷವಾಗಿದೆ.
ಆನಂದ್ ಸಿನಿಮಾ ಮೂಲಕ ಹೀರೋ ಆಗಿ ಬೆಳ್ಳಿ ತೆರೆಗೆ ಪ್ರವೇಶಿಸಿದ ದೊಡ್ಮನೆ ದೊಡ್ಡ ಮಗ ಶಿವರಾಜ್ ಕುಮಾರ್ ಇಂದು ಪರಭಾಷೆಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಕನಿಷ್ಠ ವರ್ಷಕ್ಕೆ ಒಂದು ಸಿನಿಮಾವಾದರೂ ಮಾಡುತ್ತಾ 125 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶಿವಣ್ಣನಿಗೆ ಈಗ 61 ವರ್ಷ. ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಕೇವಲ 23 ರ ಚಿಗುರು ಮೀಸೆಯ ಯುವಕ. ಸುಧಾರಾಣಿ ಅವರ ಮೊದಲ ಸಿನಿಮಾ ನಾಯಕಿ. ಆದರೆ ಇದಕ್ಕಿಂತ ಮೊದಲು 1974 ರಲ್ಲಿಯೇ ಶಿವಣ್ಣ ಬಾಲ್ಯ ನಟನಾಗಿ ಅತಿಥಿ ಪಾತ್ರ ಮಾಡಿದ್ದರು. ಆದರೆ ಪೂರ್ಣಪ್ರಮಾಣದ ನಟನಾಗಿ ಚಿತ್ರರಂಗಕ್ಕೆ ಬಂದಿದ್ದು 1986 ರಲ್ಲಿ ಆನಂದ್ ಸಿನಿಮಾ ಮೂಲಕ. ಮೊದಲ ಸಿನಿಮಾವೇ ಶತದಿನೋತ್ಸವ ಆಚರಿಸಿತ್ತು.
ಶಿವರಾಜ್ ಕುಮಾರ್ ಅಂದಿನಿಂದ ಇಂದಿನವರೆಗೂ ಹೀರೋ ಆಗಿಯೇ ಅಭಿನಯಿಸುತ್ತಿದ್ದಾರೆ. ಅವರ ಎನರ್ಜಿ ಕೊಂಚವೂ ಕಮ್ಮಿಯಾಗಿಲ್ಲ. ಇತ್ತೀಚೆಗೆ ಕನ್ನಡದ ಹೊರತಾಗಿ ತಮಿಳು, ತೆಲುಗಿನಲ್ಲೂ ಆಫರ್ ಬಂದಿದೆ.
ಓಂ, ಜೋಗಿ, ಎಕೆ 47 ಸಿನಿಮಾಗಳು ಅವರಿಗೆ ಮಾಸ್ ಇಮೇಜ್ ಕೊಟ್ಟ ಸಿನಿಮಾಗಳು. ಆರಂಭದಲ್ಲಿ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಮಾಡುತ್ತಾ ಬಂದಿದ್ದ ಶಿವಣ್ಣ ಬಳಿಕ ವೈವಿದ್ಯಮಯ ಪಾತ್ರಗಳನ್ನು ಮಾಡುತ್ತಾ ಬಂದರು. ಇತ್ತೀಚೆಗಂತೂ ನಿರ್ಮಾಪಕರ ಜೀವನೋಪಾಯಕ್ಕೆಂದೇ ಸಿನಿಮಾ ಒಪ್ಪಿಕೊಳ್ಳುವುದೂ ಇದೆ. ಈಗಲೂ ಕೈಯಲ್ಲಿ ಹತ್ತಾರು ಸಿನಿಮಾಗಳಿವೆ. ಅವರ ಯಶಸ್ವೀ ಸಿನಿ ಜರ್ನಿಗೆ 38 ವರ್ಷವಾಗಿದ್ದು, ಸಿಡಿಪಿ, ಶುಭಾಶಯ ಸಂದೇಶಗಳ ಮೂಲಕ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.