ಶೃತಿ – ಸರ್ಜಾ ನಡುವೆ ಸಂಧಾನ ವಿಫಲ; ನಿರ್ಧಾರ ತಿಳಿಸಲು ಸಮಯಾವಕಾಶ ನೀಡಿದ ಫಿಲ್ಮ್ ಚೇಂಬರ್
ಶುಕ್ರವಾರ, 26 ಅಕ್ಟೋಬರ್ 2018 (06:46 IST)
ಬೆಂಗಳೂರು : ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಾರೀ ಸಂಚಲನ ಮೂಡಿಸಿದ್ದು , ಗುರುವಾರ ಸಭೆ ನಡೆಸಿದ ಚಿತ್ರರಂಗದ ಗಣ್ಯರು ಇವರಿಬ್ಬರ ನಡುವೆ ಸಂಧಾನ ಮಾಡಲು ವಿಫಲರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಶೃತಿ – ಸರ್ಜಾ ನಡುವೆ ಸಂಧಾನ ಮಾಡಲು ಗುರುವಾರ ವಾಣಿಜ್ಯ ಮಂಡಳಿಯಲ್ಲಿ ಅಂಬರೀಶ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ಇದಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ಆದರೆ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಸಂಧಾನಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ನಟ ಅರ್ಜುನ್ ಸರ್ಜಾ, ‘ಸಂಧಾನ ಎಂಬ ಮಾತೇ ಇಲ್ಲ. ಕಾನೂನು ಮೂಲಕ ಹೋರಾಟ ನಡೆಸಲು ಸಿದ್ಧವಾಗಿದ್ದೇನೆ. ಕೆಲವರು ನನ್ನ ತೇಜ್ಯೊವಧೆಗೆ ಪ್ರಯತ್ನಿಸುತ್ತಿದ್ದಾರೆ. ಅದು ಯಾರೆಂಬುವುದು ನಿಮಗೆಲ್ಲರಿಗೂ ತಿಳಿಯಲಿದೆ.
ಪ್ರಕರಣ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಹೆಚ್ಚಾಗಿ ಮಾತನಾಡೋದಿಲ್ಲ. ಮೀಟೂ ಎಂಬುವುದು ದೊಡ್ಡ ವೇದಿಕೆ. ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋದು ದುರಂತ. ನಾನು ಪ್ರಕರಣದಿಂದ ಹಿಂದೆ ಸರಿದ್ರೆ ಮುಂದಿನ ದಿನಗಳಲ್ಲಿ ಈ ರೀತಿಯ ದುರಪಯೋಗ ಹೆಚ್ಚಾಗಬಾರದು ಅಂತಾ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಹಾಗೇ ಈ ಬಗ್ಗೆ ಮಾತನಾಡಿದ ನಟಿ ಶೃತಿ ಹರಿಹರನ್ ,’ಅರ್ಜುನ್ ಸರ್ಜಾ ಕಾನೂನು ಮೊರೆ ಹೋಗಿಲ್ಲ ಅಂತಾ ಹಾಗಾಗಿ ನಾನು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಅರ್ಜುನ್ ಸರ್ಜಾ ನನ್ನ ವಿರುದ್ಧ ಎರಡು ಕೇಸ್ ಹಾಕಿದ್ದಾರೆ ಎಂಬ ವಿಷಯ ಇದೀಗ ಗೊತ್ತಾಗಿದೆ. ದೂರು ನೀಡಿದ್ದರಿಂದ ಸಂತೋಷವಾಗಿದ್ದು, ಕಾನೂನು ಹೋರಾಟ ನಡೆಸಲು ನಾನು ಸಿದ್ಧವಾಗಿದ್ದೇನೆ. ನಾನು ತಪ್ಪೇ ಮಾಡಿಲ್ಲ, ನಾನು ಯಾಕೆ ಕ್ಷಮೆ ಕೇಳಬೇಕು, ತೊಂದರೆ ಆಗಿರೋದು ನನಗೆ ಎಂದು ಕೆಂಡಾಮಂಡಲ ಆಗಿದ್ದಾರೆ.
ಶೃತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ವಿವಾದದ ಸಂಧಾನ ಸಭೆ ವಿಫಲವಾದ ಕಾರಣ ಇಬ್ಬರಿಗೂ ಫಿಲ್ಮ್ ಚೇಂಬರ್ ಸಮಯಾವಕಾಶ ನೀಡಿದ್ದು, ತಮ್ಮ ನಿರ್ಧಾರವನ್ನು ಆದಷ್ಟು ಬೇಗ ತಿಳಿಸಬೇಕೆಂದು ಚಲನಚಿತ್ರ ಮಂಡಳಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.