ಬೆಂಗಳೂರು: ಮೈಸೂರು ಮೂಲದ ಕನ್ನಡ ಗಾಯಕ ವಿಜಯ್ ಪ್ರಕಾಶ್ ಗೆ ಇಂದು 48 ನೇ ಜನ್ಮದಿನ. ಕನ್ನಡದ ಗಾಯಕರೊಬ್ಬರು ವಿಶ್ವದಾದ್ಯಂತ ಹೆಸರು ಮಾಡಿದ ಹೆಮ್ಮೆ ನಮ್ಮದು.
ವಿಜಯ್ ಪ್ರಕಾಶ್ ಹುಟ್ಟಿದ್ದು, ಬಾಲ್ಯ ಕಳೆದಿದ್ದು ಮೈಸೂರಿನಲ್ಲಿ. ಸಂಗೀತ ಹಿನ್ನಲೆಯ ಕುಟುಂಬದಿಂದ ಬಂದವರಾಗಿದ್ದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿದ್ದರು. ಬಳಿಕ ಮುಂಬೈಗೆ ಅವಕಾಶ ಅಲಸಿ ಹೊರಟ ವಿಪಿ ಸರ್ ಅಲ್ಲಿ ಜಾಹೀರಾತುಗಳಿಗೆ ಹಿನ್ನಲೆ ಧ್ವನಿ ನೀಡುತ್ತಾ, ಹಾಡುಗಾರ, ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡರು. ಕನ್ನಡದಲ್ಲಿ ಗಾಳಿಪಟ ಸಿನಿಮಾದಲ್ಲಿ ಕವಿತೇ ಕವಿತೇ ಹಾಡಿನ ಮೂಲಕ ಮನೆ ಮಾತಾದರು.
ಬಳಿಕ ಕನ್ನಡದಲ್ಲಿ ಎಷ್ಟೋ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಸಂಗೀತ ಎರಡೂ ತಿಳಿದಿರುವ ಮೇಧಾವಿ. ಜೊತೆಗೆ ಅವರಷ್ಟು ಮಂದ್ರಸ್ಥಾಯಿಯಲ್ಲಿ ಹಾಡಬಲ್ಲ ಮತ್ತೊಬ್ಬ ಹಾಡುಗಾರ ಬಹುಶಃ ಸದ್ಯಕ್ಕೆ ಕನ್ನಡದಲ್ಲಿ ಮತ್ತೊಬ್ಬರಿಲ್ಲ ಎನ್ನಬಹುದು. ಪ್ರೇಮ ಗೀತೆಯಾಗಿರಬಹುದು, ಭಕ್ತಿ ಗೀತೆಯಾಗಿರಬಹುದು ತಮ್ಮ ಕಂಠದಿಂದ ಮೋಡಿ ಮಾಡುವ ಮಾಡುವ ಗಾಯಕ.
ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿಯಲ್ಲೂ ಹಲವು ಸಿನಿಮಾ ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಅದರಲ್ಲೂ ಎಆರ್ ರೆಹಮಾನ್ ಗೆ ಆಸ್ಕರ್ ತಂದಿತ್ತ ಜೈ ಹೋ ಹಾಡಿನಲ್ಲೂ ಧ್ವನಿಗೂಡಿಸಿದ ಹೆಮ್ಮೆ ಅವರದ್ದು. ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ವಿದೇಶದಲ್ಲೂ ಜನಪ್ರಿಯರಾಗಿದ್ದಾರೆ.
ನಾರ್ತ್ ಕಾರ್ಲೋನಿಯಾದಲ್ಲಿ ಮೇ 12 ರಂದು ಅವರು ಲೈವ್ ಕಾರ್ಯಕ್ರಮ ನೀಡಿದ ಬಳಿಕ ಅಲ್ಲಿನ ಜನ ಎಷ್ಟು ಅಭಿಮಾನಿಗಳಾದರೆಂದರೆ ಆ ದಿನವನ್ನು ಎಂದೆಂದಿಗೂ ಅಲ್ಲಿನ ಸ್ಥಳೀಯಾಡಳಿತ ವಿಜಯ್ ಪ್ರಕಾಶ್ ಡೇ ಎಂದು ಗೌರವ ಸಮರ್ಪಿಸಿತು. ಭಾರತದಲ್ಲೂ ಪವಿತ್ರ ಕಾಶಿಯಲ್ಲಿ ಅವರು ಹಾಡುವ ಓಂ ಶಿವೋಹಂ ಹಾಡು ಪ್ರತಿನಿತ್ಯ ಹಾಕಲಾಗುತ್ತದೆ. ಅಭಿಮಾನಿಗಳಿಂದ ವಿಪಿ ಸರ್ ಎಂದೇ ಕರೆಯಿಸಿಕೊಳ್ಳುವ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಗೆ ಹ್ಯಾಪೀ ಬರ್ತ್ ಡೇ.