ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡ್ ನಿರ್ದೇಶಿಸಿ ನಟಿಸಿರುವ ಸು ಫ್ರಮ್ ಸೋ ಸಿನಿಮಾ ಇಂದು ವಾರದ ಆರಂಭದ ದಿನವಾಗಿದ್ದರೂ ಟಿಕೆಟ್ ಗಳು ಬಿಸಿ ದೋಸೆಯಂತೆ ಖಾಲಿಯಾಗುತ್ತಿವೆ.
ಸ್ಟಾರ್ ಗಳಿಲ್ಲದಿದ್ದರೂ ಒಳ್ಳೆ ಕತೆ ಇದ್ದರೆ ಪ್ರೇಕ್ಷಕರು ಸಿನಿಮಾ ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಈ ಸಿನಿಮಾವೇ ಸಾಕ್ಷಿ. ಇಂತಹದ್ದೊಂದು ಸಿನಿಮಾ ಇದೆ ಎಂದು ಜನಕ್ಕೆ ಗೊತ್ತಾಗಿದ್ದೇ ಕಳೆದ ವಾರ. ಹೆಚ್ಚು ಅಬ್ಬರದ ಪ್ರಚಾರವಿಲ್ಲ. ಸ್ಟಾರ್ ಗಳಿಲ್ಲ. ಆದರೂ ಕೇವಲ ಒಂದು ಟ್ರೈಲರ್ ನಿಂದ ಜನರ ಗಮನ ಸೆಳೆಯಿತು.
ಇದೀಗ ಈ ಸಿನಿಮಾವನ್ನು ಒಮ್ಮೆ ನೋಡಿದವರು ಮತ್ತೊಮ್ಮೆ ಬರುತ್ತಿದ್ದಾರೆ. ಕುಟುಂಬ ಸಮೇತರಾಗಿ ಬಂದು ನೋಡುತ್ತಿದ್ದಾರೆ. ಅಷ್ಟರಮಟ್ಟಿಗೆ ಚಿತ್ರ ಜನರಿಗೆ ಇಷ್ಟವಾಗಿದೆ. ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾ ಮೂರೇ ದಿನಕ್ಕೆ 6 ಕೋಟಿ ರೂ. ಬಾಚಿಕೊಂಡಿದೆ. ನಿನ್ನೆ ಒಂದೇ ದಿನ ಚಿತ್ರದ ಗಳಿಕ 3 ಕೋಟಿ ದಾಟಿದೆ.
ನಿನ್ನೆ ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದವು. ವಿಶೇಷವೆಂದರೆ ಇಂದು ಸೋಮವಾರವಾಗಿದ್ದರೂ ಇಂದೂ ಬೆಳಗಿನ ಮತ್ತು ಸಂಜೆ ಶೋಗಳ ಟಿಕೆಟ್ ಗಳಿಗೆ ಭಾರೀ ಬೇಡಿಕೆಯಾಗಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗುತ್ತಿದೆ.
ನಿನ್ನೆ ಸಿಂಗಲ್ಸ್ ಸ್ಕ್ರೀನ್ ಸಿನಿಮಾ ಮಂದಿರಗಳ ಎಕಾನಮಿ ಕ್ಲಾಸ್ ಟಿಕೆಟ್ ದರ 120 ರೂ.ಗಳಿತ್ತು. ಆದರೆ ಇಂದು 150 ರೂ. ಗೆ ಏರಿಕೆಯಾಗಿದೆ. ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ 400 ರೂ.ವರೆಗೂ ತಲುಪಿದೆ. ಹಾಗಿದ್ದರೂ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನಿಜವಾಗಿಯೂ ಗೆಲುವು ಸಿಕ್ಕಂತಾಗಿದೆ.