ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಸುಪ್ರೀಂಕೋರ್ಟ್ ನ ಈ ಒಂದು ವಿಚಾರ ಈಗ ಲಾಭವಾಗಿ ಪರಿಣಮಿಸಿದೆ. ಅದೇನದು ನೋಡಿ.
ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ಈಗ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ.
ಕಳೆದ ಬಾರಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಮೇಗೆ ಮುಂದೂಡಿಕೆ ಮಾಡಿತ್ತು. ಈಗ ಮತ್ತೆ ವಿಚಾರಣೆ ನಡೆಸಿದ ಕೋರ್ಟ್ ಮತ್ತೆ ವಿಚಾರಣೆ ಮುಂದೂಡಿದೆ. ಈಗ ಸುಪ್ರೀಂಕೋರ್ಟ್ ಗೆ ಬೇಸಿಗೆ ರಜೆ ನಡೆಯುತ್ತಿದೆ. ಜುಲೈ 14ರವರೆಗೂ ರಜೆಯಿರಲಿದೆ. ಹೀಗಾಗಿ ಅಲ್ಲಿಯವರೆಗೆ ವಿಚಾರಣೆ ಮುಂದೂಡಲಾಗಿದೆ. ಅಲ್ಲಿಯವರೆಗೆ ದರ್ಶನ್ ಆಂಡ್ ಗ್ಯಾಂಗ್ ಈಗಿನಂತೇ ಆರಾಮವಾಗಿ ಹೊರಗೆ ಓಡಾಡಿಕೊಂಡಿರಲು ಅವಕಾಶ ನೀಡಲಾಗಿದೆ.
ಇನ್ನು ಕೇಸ್ ಗೆ ಸಂಬಂಧಪಟ್ಟಂತೆ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದ ಅಧಿಕಾರಿಗಳು 132 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಪಟ್ಟಣಗೆರೆ ಶೆಡ್ ನಲ್ಲಿ ಕೃತ್ಯದ ಬಳಿಕ ತೆಗೆಸಿದ್ದ ಫೋಟೋ ದಾಖಲೆಯೂ ಇದೆ. ಮುಂದಿನ ವಿಚಾರಣೆ ವೇಳೆ ಈ ವಿಚಾರವನ್ನೂ ಸುಪ್ರೀಂಕೋರ್ಟ್ ಮುಂದೆ ವಾದಿಸುವ ನಿರೀಕ್ಷೆಯಿದೆ.