ದರ್ಶನ್ ಗೆ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್
ಇಂದು ಆರೋಪಿ ದರ್ಶನ್ ಪರ ವಕೀಲರು ವಾದ ಮಂಡಿಸಬೇಕಿತ್ತು. ಅದಕ್ಕಿಂತ ಮೊದಲು ನ್ಯಾ. ಪರ್ದಿವಾಲಾ ಮತ್ತು ನ್ಯಾ. ಆರ್ ಮಹದೇವನ್ ಅವರನ್ನೊಳಗೊಂಡ ಪೀಠ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದರು. ಅದರಂತೆ ವಕೀಲ ಸಿದ್ಧಾರ್ಥ್ ಲೂತ್ರಾ ಪ್ರಕರಣದ ಸಂಪೂರ್ಣ ವಿವರಣೆಯನ್ನು ನ್ಯಾಯಾಧೀಶರಿಗೆ ನೀಡಿದರು. ಈ ವೇಳೆ ಆಗಾಗ ದರ್ಶನ್ ಪ್ರಕರಣದ ಸಾಕ್ಷಿಗಳ ಜೊತೆ ಕಾಣಿಸಿಕೊಂಡಿರುವುದರ ಬಗ್ಗೆ ಮತ್ತು ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಿದ ಬಗ್ಗೆ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಆರೋಪಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಇದೀಗ ಎರಡೂ ಕಡೆಯ ವಾದ-ವಿವಾದ ಮುಕ್ತಾಯವಾಗಿದ್ದು ಜಾಮೀನು ನೀಡಿರುವುದು ಸರಿಯೇ ಎಂಬ ಬಗ್ಗೆ ಒಂದು ವಾರದಲ್ಲಿ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ತೀರ್ಪು ರದ್ದುಗೊಳಿಸಿದರೆ ದರ್ಶನ್ ಹಾಗೂ ಏಳು ಪ್ರಮುಖ ಆರೋಪಿಗಳು ಮತ್ತೆ ಜೈಲು ಸೇರಬೇಕಾಗುತ್ತದೆ.