ತಬಲಾ ನಾಣಿ ಇತ್ತೀಚಿನ ದಿನಗಳಲ್ಲಿ ತಮ್ಮ ಟ್ರೇಡ್ ಮಾರ್ಕಿನಂತಿರೋ ನಶೆಯ ಪಾತ್ರದಿಂದ ಬೇರೆ ವೆರೈಟಿಗಳತ್ತ ಹೊರಳಿಕೊಂಡಿದ್ದರು. ಆದರೆ ನವ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಮತ್ತೆ ತಬಲಾ ನಾಣಿಯವರಿಗೆ ನಶೆಯೇರಿಸಿದ್ದಾರೆ. ಈ ಕಾರಣದಿಂದಲೇ ನಾಣಿ ಮತ್ತೆ ಕುಡುಕನ ಪಾತ್ರ ಮಾಡಿದ್ದಾರೆ. ಈ ಮೂಲಕ ಮತ್ತೊಂದು ಸುತ್ತು ಬಾರಿನಲ್ಲಿ ತಬಲಾ ಸೌಂಡು ಕೇಳಿಸಲಿದೆ. ಹಾಗಂದಾಕ್ಷಣ ಇದು ನಾಣಿ ಈವರೆಗೆ ನಿರ್ವಹಿಸಿಕೊಂಡು ಬಂದಿರೋ ಪಾತ್ರಗಳಿಗೂ ಚಿತ್ರಕಥಾ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆಯಂತೆ.
ಬಾರಿನೊಳಗೆ ತೂರಿಕೊಂಡು ಮಿಕಗಳಿಗಾಗಿ ಹೊಂಚು ಹಾಕಿ ಯಾರಿಂದಲೋ ಎಣ್ಣೆ ಸೇವೆ ಮಾಡಿಸಿಕೊಂಡು ಟೈಟಾಗೋದು ನಾಣಿ ಪಾತ್ರದ ಮಹಾತ್ಮೆ. ಕಡೆಗೆ ಎಣ್ಣೆ ಹೊಡೆಸಿದವರಿಗೆ ಅಮೂಲ್ಯ ಮಾತುಗಳನ್ನು ಹೇಳೋ ಮೂಲಕ ಋಣ ಸಂದಾಯ ಮಾಡೋದು ಈ ಪಾತ್ರದ ಸ್ಪೆಷಾಲಿಟಿ. ಹೀಗೆಯೇ ಯಾವುದೋ ಹತಾಶೆಯಿಂದ ನಾಯಕನೂ ಬಾರು ಸೇರಬೇಕಾಗಿ ಬರುತ್ತೆ. ಆ ಆ ದಿನದ ನಾಣಿಯ ಎಣ್ಣೆ ಸೇವಾಕರ್ತನಾಗುತ್ತಾನೆ. ಹಾಗೆ ಮುಖಾಮುಖಿಯಾದ ನಾಯಕನಿಗೆ ನಾಣಿ ಬದುಕಿನ ಸಾರದಂಥಾ ಮಾತುಗಳನ್ನು ಹೇಳುತ್ತಾರೆ. ಈ ಮಾತುಗಳೇ ಕಥೆಯ ದಿಕ್ಕು ಬದಲಾಗಲೂ ಕಾರಣವಾಗುತ್ತೆ. ಈ ಪಾತ್ರದಲ್ಲಿ ಅಂಥಾ ಮಜವೇನಿದೆ ಅನ್ನೋದು ಈ ವಾರವೇ ಗೊತ್ತಾಗಲಿದೆ.