ವಿಷ್ಣುವರ್ಧನ್ ಇರುವ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು: ವಿವಾದಕ್ಕೆ ಟ್ವಿಸ್ಟ್

Krishnaveni K

ಶುಕ್ರವಾರ, 29 ಆಗಸ್ಟ್ 2025 (13:43 IST)
ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಇರುವ ಅಭಿಮಾನ್ ಸ್ಟುಡಿಯೋ ಜಾಗವನ್ನು ಮುಟ್ಟುಗೋಲು ಹಾಕಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇದೀಗ ಭೂ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದೆ.

ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿಯಿದ್ದ ಅಭಿಮಾನ್ ಸ್ಟುಡಿಯೋವನ್ನು ಹಿರಿಯ ನಟ ಬಾಲಣ್ಣ ಕುಟುಂಬಕ್ಕೆ ಸರ್ಕಾರ ನೀಡಿತ್ತು. ಇದೇ ಸ್ಥಳದಲ್ಲಿ ವಿಷ್ಣುವರ್ಧನ್ ಅವರನ್ನು ಸಮಾಧಿ ಮಾಡಲಾಗಿತ್ತು. ಮೊನ್ನೆಯಷ್ಟೇ ಬಾಲಣ್ಣ ಕುಟುಂಬಸ್ಥರು ಕೋರ್ಟ್ ನಿಂದ ಆದೇಶ ತಂದು ಸಮಾಧಿಯನ್ನು ನೆಲಸಮ ಮಾಡಿದ್ದರು.

ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ 10 ಗುಂಟೆ ಜಾಗವನ್ನಾದರೂ ಕೊಡಿ ಎಂದು ಅಭಿಮಾನಿಗಳು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಬಾಲಣ್ಣ ಕುಟುಂಬದವರು ಒಪ್ಪುತ್ತಿಲ್ಲ.

ಇದರ ನಡುವೆ ಇದೀಗ ಅರಣ್ಯ ಇಲಾಖೆ 10 ಎಕರೆ ಜಾಗವನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ. ಸರ್ಕಾರೀ ಆದೇಶದ ಅನ್ವಯ ಏಪ್ರಿಲ್ 9, 1969 ರಲ್ಲಿ 20 ಎಕರೆ ಪ್ರದೇಶವನ್ನು ಟಿಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದಲ್ಲಿ ನೀಡಲಾಗಿತ್ತು. ಸ್ಟುಡಿಯೋ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದೇ ಇರಲು ಪರಭಾರೆ ನಡೆಸಲಾಗಿತ್ತು.

ಉಲ್ಲಂಘನೆ ಮಾಡಿದಲ್ಲಿ ಜಮೀನು ಹಿಂಪಡೆಯುವುದಾಗಿ ನಮೂದಿಸಲಾಗಿತ್ತು. ಬಾಲಕೃಷ್ಣ ನಿಧನದ ಬಳಿಕ ಅವರ ಪುತ್ರ ಗಣೇಶ್ ಮತ್ತು ಮೊಮ್ಮಗ ಕಾರ್ತಿಕ್ ಅಕ್ರಮವಾಗಿ 10 ಎಕರೆ ಪ್ರದೇಶವನ್ನು ಮಾರಾಟ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ನೀಡಿದ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಈಗ ವಿವಾದಿತ ಭೂಮಿ ಸರ್ಕಾರದ ಕೈ ಸೇರಲಿದೆ. ಒಂದು ವೇಳೆ ಇದು ಅರಣ್ಯ ಭೂಮಿ ಎಂದು ನಮೂದಾದರೆ ಯಾವುದೇ ಸ್ಮಾರಕ ಕಟ್ಟಲು ಅವಕಾಶವಿರುವುದಿಲ್ಲ. ಹೀಗಾಗಿ ಸಮಾಧಿ ಕತೆ ಏನಾಗಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ