ಬೆಂಗಳೂರು: ನಿನ್ನೆ ಬೆಂಗಳೂರಿನ ಜಿಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಸುಳ್ಳು ಹೇಳಿದ್ದ ತೆಲುಗು ನಟಿ ಹೇಮಾರನ್ನು ಪೊಲೀಸರು ಸರಿಯಾಗಿಯೇ ಲಾಕ್ ಮಾಡಿದ್ದಾರೆ.
ರೇವ್ ಪಾರ್ಟಿಯಲ್ಲಿ ರೈಡ್ ನಡೆದಾಗ ಹೇಮಾ ಕೂಡಾ ಇದ್ದರು ಎಂದು ಮಾಧ್ಯಮಗಳಿಗೆ ಮಾಹಿತಿ ಬಂದಿತ್ತು. ಆದರೆ ಅದೇ ಫಾರ್ಮ್ ಹೌಸ್ ನಿಂದಲೇ ವಿಡಿಯೋ ಮಾಡಿ ನಾನು ಅಲ್ಲಿರಲಿಲ್ಲ, ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿದ್ದೇನೆ ಎಂದು ತಲೆಗೆ ಹೊಡೆದಂತೆ ಹೇಮಾ ಸುಳ್ಳು ಹೇಳಿದ್ದರು.
ಆದರೆ ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರೇ ಹೇಮಾ ಅಲ್ಲಿದ್ದಿದ್ದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ. ದಾಳಿ ವೇಳೆ ಹೇಮಾ ಕೂಡಾ ಪಾರ್ಟಿಯಲ್ಲಿದ್ದಿದ್ದು ನಿಜ ಎಂದು ಆಯಕ್ತರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ದಾಳಿ ವೇಳೆಯೇ ಫಾರ್ಮ್ ಹೌಸ್ ನಲ್ಲಿ ಹೇಮಾ ಹೇಗೆ ವಿಡಿಯೋ ಮಾಡಿದರು ಎಂಬುದನ್ನೂ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಈಗಾಗಲೇ ಪಾರ್ಟಿಯಲ್ಲಿದ್ದವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಅವರಲ್ಲಿ ಹೇಮಾ ಕೂಡಾ ಒಬ್ಬರು ಎಂಬುದನ್ನು ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ನಾನು ದಾಳಿ ವೇಳೆ ಇರಲಿಲ್ಲ, ಪಾರ್ಟಿಗೆ ಬಂದಿರಲಿಲ್ಲ ಎಂದೆಲ್ಲಾ ಕತೆ ಹೇಳುತ್ತಿರುವ ನಟಿ ಹೇಮಾರನ್ನು ಸರಿಯಾಗಿಯೇ ಲಾಕ್ ಮಾಡಿದ್ದಾರೆ. ಪಾರ್ಟಿಯಲ್ಲಿದ್ದ ಪ್ರತಿಯೊಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ಆ ಪೈಕಿ ಹೇಮಾಗೂ ನೋಟಿಸ್ ನೀಡಲಾಗುವುದು ಎಂದಿದ್ದಾರೆ.