ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಸಿಲುಕಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಮುಂದೆ ತನಿಖೆಗೆ ಹಾಜರಾಗುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ಎಚ್ ಡಿ ಕುಮಾರಸ್ವಾಮಿ, ಪ್ರಜ್ವಲ್ ಎಲ್ಲೇ ಇದ್ದರೂ ಬಂದು ಎಸ್ಐಟಿ ಮುಂದೆ ತನಿಖೆ ಹಾಜರಾಗಬೇಕು ಎಂದಿದ್ದಾರೆ. ನನ್ನ, ಎಚ್ ಡಿ ದೇವೇಗೌಡರ ಮೇಲೆ ಸ್ವಲ್ಪವಾದರೂ ಗೌರವವಿದ್ದರೆ ತನಿಖೆಗೆ ಹಾಜರಾಗು ಎಂದು ಸಹೋದರನ ಪುತ್ರ ಪ್ರಜ್ವಲ್ ಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ನನ್ನ ಮೇಲೆ, ದೇವೇಗೌಡರ ಮೇಲೆ ಕೊಂಚವಾದರೂ ಗೌರವವಿದ್ದರೆ ಕೈ ಮುಗಿದು ಮನವಿ ಮಾಡುತ್ತೇನೆ 24 ಇಲ್ಲಾ 48 ಗಂಟೆಯೊಳಗೆ ಬಂದು ಶರಣಾಗು ಈ ನೆಲದಲ್ಲಿ ಕಾನೂನು ಇರುವಾಗ ಭಯ ಯಾಕೆ? ಕಳ್ಳ ಪೊಲೀಸ್ ಆಟ ಬಿಟ್ಟು ವಿದೇಶದಿಂದ ಬಂದು ತನಿಖೆಗೆ ಹಾಜರಾಗುವಂತೆ ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಪದ್ಮನಾಭನಗರದ ನಿವಾಸಕ್ಕೆ ಪ್ರಜ್ವಲ್ ನನ್ನು ಬಿಡಿಸುವ ಬಗ್ಗೆ ಮಾತನಾಡಲು ಹೋಗಿಲ್ಲ. ಪ್ರಜ್ವಲ್ ಎಲ್ಲೇ ಇದ್ದರೂ ಬಂದು ಶರಣಾಗಲಿ ಎಂದು ತಂದೆಯವರಿಗೆ ಮನವಿ ಮಾಡಲು ಹೋಗಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಪ್ರಕರಣ ಎಲ್ಲರೂ ತಲೆತಗ್ಗಿಸುವ ಪ್ರಕರಣ. ಹೀಗಾಗಿ ನಾನು ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತಿದ್ದೇನೆ. ಈ ಕೇಸ್ ನಲ್ಲಿ ನನ್ನ ಹಾಗೂ ದೇವೇಗೌಡರನ್ನು ಎಳೆದು ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.