ಬೆಂಗಳೂರು: ಇಂದು ವರನಟ ಡಾ.ರಾಜಕುಮಾರ್ ಅವರು 96ನೇ ಹುಟ್ಟು ಹಬ್ಬದ ಹಿನ್ನೆಲೆ ನವರಸ ನಾಯಕ ಜಗ್ಗೇಶ್ ಅವರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಗೆ ನಮನ ಸಲ್ಲಿಸಿದರು.
ಈ ವೇಳೆ ರಾಜ್ ಅವರ ಜತೆಗಿನ ಸುಂದರ ಕ್ಷಣಗಳನ್ನು ಸ್ಮರಿಸಿಕೊಂಡರು. ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದು ಅಣ್ಣಾವ್ರು ಧೈರ್ಯ ತುಂಬಿದ್ದರು ಎಂದು ಹಳೆಯ ದಿನಗಳನ್ನು ಜಗ್ಗೇಶ್ ಸ್ಮರಿಸಿದ್ದಾರೆ. ಡಾ.ರಾಜ್‌ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
1994ರ ಸಮಯದಲ್ಲಿ ನನ್ನ ಸಿನಿಮಾಗಳು ಸತತ ಸೋಲು ಕಂಡವು. ಇದರಿಂದ ನಾನು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಆಸ್ಪತ್ರೆಗೆ ನನ್ನನ್ನು ದಾಖಲಿಸಿದ್ದರು. ಅಂದು ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು.
ಅತಿಯಾದ ಆಸೆ ಬೇಡ, ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗಬಾರದು ಎಂದು ಕಿವಿಹಿಂಡಿದ್ದರು. ನನಗೆ ಮಾನಸಿಕವಾಗಿ ನನ್ನ ಜೊತೆ ನಿಂತು ಧೈರ್ಯ ತುಂಬಿದರು.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ರಾಜಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿ ತಮ್ಮ ಒಟ್ಟಿಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ನನ್ನ ಕಲಾಬದುಕಿನ ಮೇಲಿನ ಅಣ್ಣನ ಕೃಪಾದೃಷ್ಟಿ ನನ್ನ ಜನ್ಮಾಂತರ ಪುಣ್ಯ..
ಇಂದು ನನ್ನ ಕಲಾದೇವರು ಹುಟ್ಟಿದ ದಿನ..
ನೀವು ನನ್ನ ಮಾನಸದಲ್ಲಿ ನೆನಪಿನ ಸಾಗರ