ನೋಯ್ಡಾ(ಉತ್ತರ ಪ್ರದೇಶ): ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸೋದರನೆಂದು ಹೇಳಿಕೊಂಡು ಬೆದರಿಕೆ ಕರೆ ಮಾಡಿ, ₹10 ಕೋಟಿ ಹಣ ಕೇಳಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ
ತೈಬ್ ಅನ್ಸಾರಿ ಎಂಬಾತ ನೋಯ್ಡಾ ಮತ್ತು ಮುಂಬೈ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಮುಂಬೈ ಪೊಲೀಸರು ಹೆಲ್ಪ್‌ಲೈನ್ ಸಂಖ್ಯೆಯಾಗಿ ಬಳಸುತ್ತಿದ್ದ ನಂಬರ್ ಅನ್ನು ಇಂಟರ್‌ನೆಟ್ ಮೂಲಕ ಪಡೆದು ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸೆಕ್ಟರ್–92ರ ನಿರ್ಮಾಣ ಹಂತದ ಕಟ್ಟಡದಲ್ಲಿ ಅನ್ಸಾರಿಯನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಆತ ಒಬ್ಬ ಕಾರ್ಪೆಂಟರ್ ಎಂದು ಇನ್ಸ್‌ಪೆಕ್ಟರ್ ಜಿತೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.
ಸೋಮವಾರ ಸಂಜೆ ನೋಯ್ಡಾ ಪೊಲೀಸರನ್ನು ಸಂಪರ್ಕಿಸಿದ್ದ ಮುಂಬೈ ಪೊಲೀಸರು, ಲಾರೆನ್ಸ್ ಬಿಷ್ಣೋಯಿ ಸಹೋದರ ಆನ್ಮೋಲ್ ಬಿಷ್ಣೋಯಿ, ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಒಡ್ಡಿದ್ದಾನೆ. ಪೋನ್ ಕರೆಯ ಲೊಕೇಶನ್ ನೋಯ್ಡಾದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಳಿಕ, ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯ ಎಎಸ್‌ಐ ರೌಫ್ ಶೇಖ್, ತಂಡದ ಜೊತೆ ನೋಯ್ಡಾಗೆ ದೌಡಾಯಿಸಿದ್ದರು.
ನೋಯ್ಡಾದ ಸೆಕ್ಟರ್ 92ರಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲೆ ದಾಳಿ ನಡೆಸಿದ ಜಂಟಿ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ. ಘಟನೆಯಲ್ಲಿ ಬಳಸಿದ ಮೊಬೈಲ್ ಅನ್ನೂ ಆತನಿಂದ ವಶಕ್ಕೆ ಪಡೆಯಲಾಗಿದೆ. ಬಳಿಕ, ಆತ ಲಾರೆನ್ಸ್ ಸಹೋದರನಲ್ಲ ಎಂಬುದು ತಿಳಿದುಬಂದಿದೆ.