ಬಾಬಾ ಸಿದ್ದಿಕಿ ಬರ್ಬರ ಹತ್ಯೆ: ಬಿಕ್ಕಿಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ, ಸಲ್ಮಾನ್‌ ಖಾನ್‌ ನಿವಾಸಕ್ಕೆ ಹೆಚ್ಚಿನ ಭದ್ರತೆ

Sampriya

ಭಾನುವಾರ, 13 ಅಕ್ಟೋಬರ್ 2024 (11:59 IST)
Photo Courtesy X
ಮುಂಬೈ: ಎನ್‌ಸಿಪಿಯ ಅಜಿತ್ ಪವಾರ್ ಬಣದ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (66) ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಶನಿವಾರ ಹತ್ಯೆಯಾಗಿದ್ದಾರೆ. ಸಿದ್ದಿಕಿ ಅವರ ಪಾರ್ಥೀವ ಶರೀರ ವೀಕ್ಷಣೆಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ಬಾಲಿವುಡ್‌ ದಂಡೇ ಬರುತ್ತಿದೆ.

ನಟರಾದ ಸಲ್ಮಾನ್‌ ಖಾನ್‌, ಸಂಜಯ್‌ ದತ್‌, ನಟಿ ಶಿಲ್ಪಾ ಶೆಟ್ಟಿ, ರಾಜ್‌ ಕುಂದ್ರಾ, ಇನ್ನೂ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಾಬಾ ಸಿದ್ದಿಕಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಶಿಲ್ಪಾ ಶೆಟ್ಟಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಸಿದ್ದಿಕಿ ಹತ್ಯೆ ಹಿಂದೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೊಯ್‌ ಕೈವಾಡ ಶಂಕೆ ವ್ಯಕ್ತವಾಗುತ್ತಿದ್ದಂತೆ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ನಲ್ಲಿರುವ ಸಲ್ಮಾನ್‌ ಖಾನ್‌ ನಿವಾಸಕ್ಕೆ ಹೆಚ್ಚಿನ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ನಟ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿತ್ತು. ಇದರಿಂದ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಇದೀಗ ಸಿದ್ದಿಕ್ಕಿ ಹತ್ಯೆ ಬೆನ್ನಲ್ಲೇ ಭದ್ರತೆ ಹೆಚ್ಚಿಸಲಾಗಿದೆ.  

ಘಟನೆ ಬಳಿಕ ಹರಿಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಆರೋಪಿಗಳನ್ನು ಬಂಧಿಸಿರುವ ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಗೆ 4 ವಿಶೇಷ ತಂಡಗಳನ್ನ ರಚಿಸಿದ್ದು, 2 ಆಯಾಮಗಳಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ