ಕಾವೇರಿ ವಿವಾದದ ಬಗ್ಗೆ ಗಮನ ಸೆಳೆಯುವ ಪೋಸ್ಟ್ ಮಾಡಿದ ನಟ ಉಪೇಂದ್ರ

ಬುಧವಾರ, 27 ಸೆಪ್ಟಂಬರ್ 2023 (16:08 IST)
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ಕನ್ನಡ ಚಿತ್ರರಂಗ ಕರ್ನಾಟಕದ ರೈತರ ಪರವಾಗಿ ನಿಂತಿದೆ. ಮೊನ್ನೆ ನಡೆದಿದ್ದ ಬೆಂಗಳೂರು ಬಂದ್ ಗೂ ಸಹಕರಿಸಿತ್ತು.

ಇದೀಗ ಉಪೇಂದ್ರ ಈ ಹಿಂದೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೇಳಿದ್ದ ಮಾತೊಂದನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ. ‘ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲಗಳು, ಅನಾನುಕೂಲಗಳು ಇರುತ್ತವೆ. ಅಲ್ಲಿನ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನಸಮುದಾಯದ್ದಾಗಿರುತ್ತದೆ. ಭೂಮಿಯ ಮೇಲಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನದಿಗೂ ಆ ಪ್ರದೇಶದ ಜೀವ ವೈವಿದ್ಯವೇ ಪ್ರಮುಖ ಹಕ್ಕುದಾರನಾಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ’ ಎಂದು ತೇಜಸ್ವಿ ಹೇಳಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ