ಬೆಂಗಳೂರು: ಕನ್ನಡ ನಟ ರಿಷಬ್ ಶೆಟ್ಟಿ ಬಾಲಿವುಡ್ ನಲ್ಲಿ ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೊರಟಿದ್ದಾರೆ. ಆದರೆ ಈ ಸಿನಿಮಾ ಮಾಡಿದರೆ ಜೋಕೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಮರಾಠಿಗರ ದಬ್ಬಾಳಿಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಈ ಬಂದ್ ಗೆ ಕೆಲವು ಸಂಘಟನೆಗಳು ಬೆಂಬಲ ನೀಡುತ್ತಿಲ್ಲ.
ಈ ಬಗ್ಗೆ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿವೆ. ಬಂದ್ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸುವಂತೆ ಕನ್ನಡ ಪರ ಹೋರಾಟಗಾರರಿಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಕನ್ನಡ ಚಿತ್ರನಟರು ಛತ್ರಪತಿ ಶಿವಾಜಿ ಸಿನಿಮಾ ಮಾಡಿದರೆ ಬಹಿಷ್ಕರಿಸುತ್ತೇವೆ, ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡಿರಬೇಕಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ರಿಷಬ್ ಶೆಟ್ಟಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.