ಕರ್ನಾಟಕ ಬಂದ್ ಯಾಕೆ ಸಾರ್ ಎಂದರೆ ವಾಟಾಳ್ ನಾಗರಾಜ್ ಹೇಳಿದ್ದೇನು ಗೊತ್ತಾ

Krishnaveni K

ಸೋಮವಾರ, 3 ಮಾರ್ಚ್ 2025 (14:50 IST)
ಬೆಂಗಳೂರು: ಮಾರ್ಚ್ 22 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬಂದ್ ಯಾಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಇದಕ್ಕೆ ಕೆಲವು ಕನ್ನಡ ಪರ ಸಂಘಟನೆಗಳು ಬೆಂಬಲ ನೀಡುತ್ತಿಲ್ಲ. ಸಾರ್ವಜನಿಕರೂ ಕರ್ನಾಟಕ ಬಂದ್ ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಂದ್ ಮಾಡುವುದರಿಂದ ಇಲ್ಲಿನ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಅಷ್ಟೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಇಂದು ವಾಟಾಳ್ ನಾಗರಾಜ್ ಗೆ ಕೇಳಿದಾಗ ‘ಕೆಲವರು ಇದನ್ನು ನೀವು ನಾನ್ಸೆನ್ಸ್ ಎಂದು ಹೇಳಿದರೆ ಅವರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ ಎಚ್ಚರ. ಮಾರ್ಚ್ 22 ರಂದು ಯಾರು ಏನೇ ಹೇಳಿದರೂ ಕರ್ನಾಟಕ ಬಂದ್ ಆಗಿಯೇ ಆಗುತ್ತದೆ. ಇದು ಬರೀ ಕರ್ನಾಟಕ ಬಂದ್ ಅಲ್ಲ, ಅಖಂಡ ಕರ್ನಾಟಕ ಬಂದ್. ಉತ್ತರ ಕರ್ನಾಟಕದ ಅಭಿವೃದ್ಧಿ, ಎಂಇಎಸ್ ನಿಷೇಧ, ಹೈದರಾಬಾದ್ ಕರ್ನಾಟಕದ ಬೆಳವಣಿಗೆ, ಮೇಕೆದಾಟು ಆಗಬೇಕು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಮಹದಾಯಿ, ಕಳಸಾ ಬಂಡೂರಿ ಆಗಬೇಕು, ಹಿಂದಿ ವಿರೋಧಿಸಬೇಕು. ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ದಾಳಿ ಮಾಡಿರುವುದನ್ನು ವಿರೋಧಿಸಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆ ಖಂಡಿಸಿ ಮಾಡುತ್ತಿರುವ ಹೋರಾಟ. ಆ ದಿನ ಮೆಟ್ರೋ ಓಡಿಸಬಾರದು, ಯಾರೂ ಮೆಟ್ರೋದಲ್ಲಿ ಹೋಗಬಾರದು. ಇದರ ಜೊತೆಗೆ ಗ್ರೇಟರ್ ಬೆಂಗಳೂರು ಎಂದು ಬೆಂಗಳೂರನ್ನು ನಾಲ್ಕು ಭಾಗವಾಗಿ ಒಡೆಯುವುದನ್ನು ವಿರೋಧಿಸಿ ಮಾಡುತ್ತಿರುವ ಹೋರಾಟ. ಇದು ನಾಡಪ್ರಭು ಕೆಂಪೇಗೌಡರಿಗೆ ಮಾಡುವ ಅವಮಾನ’ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ