ಬೆಂಗಳೂರು: ನಾಳೆ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಿದ್ದು, ಅಭಿಮಾನ್ ಸ್ಟುಡಿಯೋ ಅಕ್ಕಪಕ್ಕವಾದರೂ ಕಾರ್ಯಕ್ರಮ ಮಾಡೋಣ ಎಂದುಕೊಂಡಿದ್ದ ಅಭಿಮಾನಿಗಳಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಇದಕ್ಕೆ ವೀರಕಪುತ್ರ ಶ್ರೀನಿವಾಸ್ ಬೇಸರ ಹೊರಹಾಕಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನೆಲಸಮ ಮಾಡಿದ ಬಳಿಕ ಈಗ ಅಭಿಮಾನಿಗಳಿಗೆ ಬೆಂಗಳೂರಿನಲ್ಲಿ ನಮನ ಸಲ್ಲಿಸಲು ಜಾಗವಿಲ್ಲದಂತಾಗಿದೆ. ಈ ಕಾರಣಕ್ಕೆ ಕನಿಷ್ಠ ಪಕ್ಷ ಅದರ ಪಕ್ಕದಲ್ಲೇ ಒಂದು ಜಾಗ ಬಾಡಿಗೆ ಪಡೆದು ಒಂದು ದಿನದ ಮಟ್ಟಿಗೆ ಕಾರ್ಯಕ್ರಮ ಮಾಡೋಣ ಎಂದು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ತಯಾರಿ ನಡೆದಿತ್ತು.
ಆದರೆ ಅದಕ್ಕೂ ಈಗ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ನಿನ್ನೆಯಷ್ಟೇ ಆದೇಶ ನೀಡಿದೆ. ಇದರ ಬೆನ್ನಲ್ಲೇ ಅದರ ಸುತ್ತಮುತ್ತವೂ ಕಾರ್ಯಕ್ರಮ ಮಾಡಬಾರದು ಎಂದು ಪೊಲೀಸರು ತಡೆಯುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಕೆಂಗೇರಿ ವ್ಯಾಪ್ತಿಯ ಇನ್ನೂ ಒಂದೆರಡು ಕಾರ್ಯಕ್ರಮಗಳಿಗೂ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಬೆಳಿಗ್ಗೆಯೇ ಶಾಸಕರಾದ ಎಸ್ ಟಿ ಸೋಮಶೇಖರ್ ಅವರನ್ನು ಭೇಟಿಯಾಗಿ ವಿನಂತಿಸಿದೆವು. ಎಂಎಲ್ಎ ಸಾಹೇಬ್ರು ಸರಿಯಾಗಿ ಸ್ಪಂದಿಸಲಿಲ್ಲ. ಅವರಿಗೂ ಎಂತಹದ್ದೋ ಒತ್ತಡವಿರಬೇಕು. ಕೊನೆ ಪ್ರಯತ್ನ ಮಾಡುತ್ತಿದ್ದೇನೆ. ಏನಾಗುತ್ತದೋ ನೋಡೋಣ ಎಂದು ವೀರಕಪುತ್ರ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಅಭಿಮಾನಿಗಳೂ ಬೇಸರ ವ್ಯಕ್ತಪಡಿಸಿದ್ದು ವಿಷ್ಣುದಾದ ಎಂದರೆ ಈ ಮಟ್ಟಿಗೆ ಧ್ವೇಷ ಯಾಕೆ? ಇದು ದುರಂತ. ಜನ ನಾಯಕರಾದ ವಿಷ್ಣು ಸರ್ ಗೆ ಸರ್ಕಾರಗಳು, ಜನಪ್ರಿತನಿಧಿಗಳು ಮಾಡುತ್ತಿರುವ ಅವಮಾನ ಎಂದಿದ್ದಾರೆ.