ಚೆನ್ನೈ: ಬಹುಭಾಷೆಗಳಲ್ಲಿ ಹಾಡಿರುವ ಹಿರಿಯ ಗಾಯಕಿ ಪಿ ಸುಶೀಲಾ ಅನಾರೋಗ್ಯದಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
88 ವರ್ಷದ ಹಿರಿಯ ಗಾಯಕಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ನಿನ್ನೆ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.
ಪಿ ಸುಶೀಲಾಗೆ ಅನಾರೋಗ್ಯವೆಂದು ತಿಳಿದು ಬೆನ್ನಲ್ಲೇ ಸಾಕಷ್ಟು ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದೀಗ ಸುಶೀಲಾ ಕುಟುಂಬಸ್ಥರು ಮತ್ತು ವೈದ್ಯರು ಆತಂಕ ಪಡುವ ಅಗತ್ಯವಿಲ್ಲ. ಸದ್ಯಕ್ಕೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ನೀಡಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದ ಪಿ ಸುಶೀಲಾಗೆ 2009 ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಗಾನ ಕೋಗಿಲೆ ಎಂಬ ಬಿರುದ ಹೊಂದಿರುವ ಪಿ ಸುಶೀಲಾ ಭಾರತೀಯ ಭಾಷೆಗಳಲ್ಲಿ ಅತೀ ಹೆಚ್ಚು ಹಾಡು ಹಾಡಿದ ಗಿನ್ನಿಸ್ ದಾಖಲೆಯನ್ನೂ ಮಾಡಿದ್ದಾರೆ.