ಮುಂಬೈ: ನಟಿ ರಶ್ಮಿಕಾ ಮಂದಣ್ಣ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರ ಜೊತೆ ಸೆಲ್ಫೀ ಕೇಳಲು ಅನೇಕರು ಬರುತ್ತಾರೆ.ಅದೇ ರೀತಿ ತನ್ನ ಎಳೆಯ ಮಗುವನ್ನು ಕರೆದುಕೊಂಡು ಬಂದ ಮಹಿಳೆಯ ಜೊತೆ ರಶ್ಮಿಕಾ ನಡೆದುಕೊಂಡ ರೀತಿ ಈಗ ನೆಟ್ಟಿಗರ ಮನ ಗೆದ್ದಿದೆ.
ಸಾಮಾನ್ಯವಾಗಿ ರಶ್ಮಿಕಾ ಏರ್ ಪೋರ್ಟ್ ನಲ್ಲಿ ಕಂಡುಬಂದರೆ ಪಪ್ಪಾರಾಜಿಗಳು, ಅಭಿಮಾನಿಗಳು ಸೆಲ್ಫೀಗಾಗಿ ಮುತ್ತಿಕೊಳ್ಳುತ್ತಾರೆ. ಅದೇ ರೀತಿ ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತಮ್ಮ ಕಾರು ಏರಲು ಹೊರಟಿದ್ದಾರೆ. ಈ ವೇಳೆ ಸಾಕಷ್ಟು ಅಭಿಮಾನಿಗಳು, ಪಪ್ಪಾರಾಜಿಗಳು ಫೋಟೋಗಾಗಿ ಅವರನ್ನು ಮುತ್ತಿಕೊಂಡಿದ್ದಾರೆ.
ಈ ಪೈಕಿ ಮಹಿಳೆಯೊಬ್ಬರು ತಮ್ಮ ಎಳೆಯ ಕಂದಮ್ಮನನ್ನು ಕರೆದುಕೊಂಡು ರಶ್ಮಿಕಾ ಬಳಿ ಸೆಲ್ಫೀಗಾಗಿ ಓಡೋಡಿ ಬಂದಿದ್ದಾರೆ. ಮಹಿಳೆಯ ಕೈಯಲ್ಲಿದ್ದ ಮಗುವಿಗೆ ಆಗಷ್ಟೇ ಎರಡೋ-ಮೂರೋ ತಿಂಗಳು ತುಂಬಿದಂತಿತ್ತು.
ಅಷ್ಟು ಎಳೆಯ ಮಗುವನ್ನು ಕರೆದುಕೊಂಡು ಬಂದಿದ್ದಕ್ಕೆ ರಶ್ಮಿಕಾಗೆ ನಿಜಕ್ಕೂ ಖುಷಿ ಜೊತೆ ಬೇಸರವೂ ಆಗಿದೆ. ಮಹಿಳೆ ಜೊತೆ ಸೆಲ್ಫೀಗೆ ಪೋಸ್ ಕೊಟ್ಟ ಬಳಿಕ ದಯವಿಟ್ಟು ಇಷ್ಟು ಚಿಕ್ಕ ಮಗುವನ್ನು ಕರೆದುಕೊಂಡು ಇಲ್ಲೆಲ್ಲಾ ಬರಬೇಡಿ ಎಂದು ಮನವಿಯನ್ನೂ ಮಾಡಿ ಅಭಿಮಾನಿಯನ್ನು ಕಳುಹಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ರಶ್ಮಿಕಾ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.