ಹೈದರಾಬಾದ್: ಟಾಲಿವುಡ್ ಹೀರೋ ವಿಜಯ್ ದೇವರಕೊಂಡಗೆ ಮತ್ತೆ ಸೋಲಾಗಿದೆ. ಫ್ಯಾಮಿಲಿ ಸ್ಟಾರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿಸಿದಷ್ಟು ಗಳಿಕೆ ಮಾಡಿಲ್ಲ.
ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 5.75 ಕೋಟಿ ರೂ. ಮೊದಲ ದಿನ ಗಳಿಕೆ ಜೊತೆಗೆ ಸಿನಿಮಾ ಬಗ್ಗೆಯೂ ಸಾಕಷ್ಟು ಟೀಕೆ ಕೇಳಿಬರುತ್ತಿದೆ.
ವಿಜಯ್ ಎಲ್ಲಾ ಸಿನಿಮಾಗಳಲ್ಲೂ ಒಂದೇ ರೀತಿಯ ಪಾತ್ರ ಮಾಡುತ್ತಾರೆ. ಕತೆಯೂ ಒಂದೇ ರೀತಿಯದ್ದಾಗಿರುತ್ತದೆ. ವೈವಿಧ್ಯಮಯವಾಗಿರುವುದಿಲ್ಲ ಎಂದು ಟೀಕೆ ಕೇಳಿಬಂದಿದೆ. ಇದಕ್ಕಿಂತ ಮೊದಲು ಬಿಡುಗಡೆಯಾಗಿದ್ದ ಲೈಗರ್ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಮಕಾಡೆ ಮಲಗಿತ್ತು.
ಅದಾದ ಬಳಿಕ ವಿಜಯ್ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡು ಖುಷಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಅದೂ ಕೂಡಾ ನಿರೀಕ್ಷಿಸಿದಷ್ಟು ಸಕ್ಸಸ್ ಕಾಣಲಿಲ್ಲ. ಹೀಗಾಗಿ ವಿಜಯ್ ಸೋಲಿನ ಮೇಲೆ ಸೋಲು ಕಂಡಂತಾಯಿತು. ಇದೀಗ ಫ್ಯಾಮಿಲಿ ಸ್ಟಾರ್ ಕೂಡಾ ತೋಪೆದ್ದು ಹೋಗುವ ಸ್ಥಿತಿಯಲ್ಲಿದೆ. ಅಲ್ಲಿಗೆ, ವಿಜಯ್ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದ್ದಾರೆ.