ಮಧ್ಯಂತರ ಜಾಮೀನು ಸಿಕ್ಕರೆ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗಬಹುದೇ ಇಲ್ಲಿದೆ ಉತ್ತರ

Krishnaveni K

ಬುಧವಾರ, 30 ಅಕ್ಟೋಬರ್ 2024 (08:51 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಇಂದು ಮಧ್ಯಂತರ ಜಾಮೀನು ಸಿಗುವ ನಿರೀಕ್ಷೆಯಿದೆ. ಆದರೆ ಮಧ್ಯಂತರ ಜಾಮೀನು ಸಿಕ್ಕರೆ ದರ್ಶನ್ ಏನೆಲ್ಲಾ ಮಾಡಬಹುದು, ಏನು ಮಾಡಬಾರದು ಇಲ್ಲಿದೆ ವಿವರ.

ಮುಖ್ಯವಾಗಿ ದರ್ಶನ್ ನಂಬಿಕೊಂಡು ಬಂಡವಾಳ ಹೂಡಿರುವ ನಿರ್ಮಾಪಕರಿಗೆ ಈಗ ತಮ್ಮ ಸಿನಿಮಾ ಮುಗಿಸುವುದೇ ಚಿಂತೆಯಾಗಿದೆ. ಆದರೆ ಮಧ್ಯಂತರ ಜಾಮೀನು ಸಿಕ್ಕರೆ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗಬಹುದೇ ಎಂಬ ಉತ್ತರಗಳಿಗೆ ಇಂದು ಕೋರ್ಟ್ ನೀಡುವ ಕಾರಣಗಳು ಮುಖ್ಯವಾಗಲಿದೆ.

ದರ್ಶನ್ ಅನಾರೋಗ್ಯದ ನೆಪವೊಡ್ಡಿ ಈಗ ಮಧ್ಯಂತರ ಜಾಮೀನಾದರೂ ನೀಡಿ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು. ಇದು ಪೂರ್ಣ ಪ್ರಮಾಣದ ಜಾಮೀನು ಆಗಿರಲ್ಲ. ಮಧ್ಯಂತರ ಜಾಮೀನು ಎಂದರೆ ಯಾವುದಾದರೂ ಉದ್ದೇಶಕ್ಕೆ ನೀಡುವುದಾಗಿರುತ್ತದೆ. ಇದೀಗ ದರ್ಶನ್ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯದ ಬಗ್ಗೆ ಹೇಳಿರುವುದರಿಂದ ಸದ್ಯಕ್ಕೆ ಶಸ್ತ್ರಚಿಕಿತ್ಸೆ ಮುಗಿಸಿ ಮತ್ತೆ ಕೋರ್ಟ್ ಗೆ ಶರಣಾಗಬೇಕಾದೀತು.

ಒಂದು ವೇಳೆ ಪೂರ್ಣಾವಧಿ ಜಾಮೀನು ಸಿಕ್ಕರೆ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗಬಹುದು. ಆದರೆ ಮಧ್ಯಂತರ ಜಾಮೀನು ಎಂದರೆ ಕಾಲ ಕಾಲಕ್ಕೆ ಅವರು ಆರೋಗ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿರಬೇಕು. ತಮ್ಮ ಪಾಸ್ ಪೋರ್ಟ್ ಗಳನ್ನು ಸರೆಂಡರ್ ಮಾಡಬೇಕು. ಪೊಲೀಸರ ಅನುಮತಿ ಇಲ್ಲದೇ ನಗರ ಬಿಟ್ಟು ತೆರಳುವಂತಿಲ್ಲ. ನಿಯಮಿತವಾಗಿ ಪೊಲೀಸ್ ಠಾಣೆಗೆ ಬಂದು ಹಾಜರಾತಿ ಹಾಕುತ್ತಿರಬೇಕು. ಇನ್ನು, ಸಾಕ್ಷಿದಾರರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೇಟಿ ಮಾಡಿ ಪ್ರಭಾವ ಬೀರುವಂತಿಲ್ಲ. ಈ ಅವಧಿಯಲ್ಲಿ ಅವರು ಯಾರಿಗೂ ಧಮ್ಕಿ ಹಾಕುವುದು ಅಥವಾ ಇದೀಗ ಆರೋಪಿಯಾಗಿರುವಂತಹದ್ದೇ ಪ್ರಕರಣದಲ್ಲಿ ಭಾಗಿಯಾಗುವಂತಿಲ್ಲ. ಇವಿಷ್ಟು ಷರತ್ತುಗಳ ಮೇಲೆಯೇ ಮಧ್ಯಂತರ ಜಾಮೀನು ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆ ಮುಗಿದು ಗುಣಮುಖರಾದ ನಂತರ ತಕ್ಷಣವೇ ಅವರು ಕೋರ್ಟ್ ಮುಂದೆ ಶರಣಾಗಲು ಇಂದು ನ್ಯಾಯಾಧೀಶರು ಆದೇಶ ನೀಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ