ಅಭಿಮಾನಿಗಳಿಗೆ ರಾಘಣ್ಣನ ಮನವಿ ಏನು?
ಇಡೀ ಕನ್ನಡ ಚಿತ್ರರಂಗಕ್ಕೆ ಕತ್ತಲು ಆವರಿಸಿದೆ. ಪುನೀತ್ ರಾಜ್ಕುಮಾರ್ ನಿಧನದಿಂದ ಅವರ ಇಡೀ ಕುಟುಂಬ ಮತ್ತು ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ.
ಇಂದು (ಅ.31) ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಅಭಿಮಾನಿಗಳು ಬಂದಿದ್ದರು. ಆದರೆ ಯಾರಿಗೂ ಕಂಠೀರವ ಸ್ಟುಡಿಯೋ ಆವರಣದ ಒಳಗೆ ಬರಲು ಅವಕಾಶ ನೀಡಿಲ್ಲ. ಕೇವಲ ಕುಟುಂಬದವರು ಮತ್ತು ಗಣ್ಯರು ಮಾತ್ರ ಭಾಗಿ ಆಗಿದ್ದರು. ಇನ್ನೂ ಮೂರು ದಿನಗಳ ಕಾಲ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ರಾಘಣ್ಣ ಹೀಗೆ ಹೇಳುತ್ತಿರುವುದಕ್ಕೂ ಕಾರಣ ಇದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದಾರೆ. ಆದರೆ ಸಮಾಧಿ ನೋಡಲು ಯಾರಿಗೂ ಈಗ ಅವಕಾಶ ಇಲ್ಲ. ಇನ್ನೂ ಮೂರು ದಿನ ಕಳೆದ ಬಳಿಕ ಅವಕಾಶ ಮಾಡಿಕೊಡುತ್ತೇವೆ. ಮಂಗಳವಾರ (ನ.2) ಹಾಲು-ತುಪ್ಪ ಕಾರ್ಯ ಇದೆ. ಮಕ್ಕಳು ಮತ್ತು ಮನೆಯವರಿಂದ ಅದನ್ನು ಮಾಡಿಸಬೇಕು. ಅದೊಂದು ಕಾರ್ಯ ಮುಗಿಸಿದ ಬಳಿಕವೇ ಬೇರೆಯವರಿಗೆ ಅನುಮತಿ ನೀಡೋಣ ಅಂತ ತೀರ್ಮಾನಿಸಿದ್ದೇವೆ ಎಂದು ರಾಘಣ್ಣ ಹೇಳಿದ್ದಾರೆ.
ಈ ಹಿಂದೆ ಅಪ್ಪಾಜಿ (ಡಾ.ರಾಜ್) ನಿಧನರಾದಾಗ ನಾವು ಬರುವುದಕ್ಕೂ ಮುನ್ನವೇ ಸುಮಾರು ಜನ ಅವರ ಸಮಾಧಿಗೆ ಹಾಲು ತುಪ್ಪ ಹಾಕಿ ಬಿಟ್ಟಿದ್ದರು. ಇನ್ನೂ ಕೆಲವರು ಸಮಾಧಿಯ ಮಣ್ಣನ್ನೇ ತೋಡಿದ್ದರು! ಈಗ ಅಂಥದ್ದಕ್ಕೆಲ್ಲ ಅವಕಾಶ ಆಗಬಾರದು. ಕೆಲವು ಅಭಿಮಾನಿಗಳು ಆ ರೀತಿ ಇರುತ್ತಾರೆ. ತಾವು ಮೊದಲು ಮಾಡೋಣ ಎಂಬ ಆತುರ ಅವರಿಗೆ ಇರುತ್ತದೆ. ಹಾಗೆ ಆಗೋದು ಬೇಡ. ಮೊದಲು ಕುಟುಂಬದವರು ಹಾಲು-ತುಪ್ಪ ಹಾಕಿದ ಬಳಿಕ ಸಾರ್ವಜನಿಕರು ಬಂದು ನೋಡಲು ಅವಕಾಶ ಕೊಡುತ್ತೇವೆ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್.