ನಟ ದರ್ಶನ್ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ: ತಡವಾಗುತ್ತಿರುವುದಕ್ಕೆ ಕಾರಣ ಬಯಲು

Krishnaveni K

ಮಂಗಳವಾರ, 19 ನವೆಂಬರ್ 2024 (14:04 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟ ದರ್ಶನ್ ಬೆನ್ನುನೋವಿನ ನೆಪದಲ್ಲಿ ಹೈಕೋರ್ಟ್ ನಿಂದ ಮಧ್ಯಂತರ ಜಮೀನು ಪಡೆದಿರುವುದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ. ಆದರೆ ಇದು ವಿಳಂಬವಾಗುತ್ತಿರುವುದು ಯಾಕೆ ಎಂದು ಇಂದು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಮಾಹಿತಿ ನೀಡಿದ್ದಾರೆ.
 

ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಈಗ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಗಾಗಿಯೇ ಮನೆಯಂತೇ ಐಷಾರಾಮಿ ಸೆಟ್ ಅಪ್ ಹಾಕಲಾಗಿದೆ. ಅವರ ಭೇಟಿಗೆ ಕುಟುಂಬಸ್ಥರನ್ನು ಬಿಟ್ಟರೆ ಯಾರಿಗೂ ಅವಕಾಶವಿಲ್ಲ.
  
ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದರೂ ದರ್ಶನ್ ಇದುವರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಿರುವುದರ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಬೆನ್ನು ನೋವು ಕೇವಲ ನೆಪ ಮಾತ್ರ ಆಗಿತ್ತಾ ಎಂಬ ಸಂಶಯಗಳೂ ಹುಟ್ಟಿಕೊಂಡಿವೆ. ಇದರ ನಡುವೆ ಗೃಹ ಇಲಾಖೆಯ ಒಪ್ಪಿಗೆ ಪಡೆದು ಪೊಲೀಸರು ಅವರ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಆದರೆ ಗೃಹ ಇಲಾಖೆಯಿಂದ ಒಪ್ಪಿಗೆ ಪಡೆದು ಒಂದು ವಾರವಾಗುತ್ತಾ ಬಂದರೂ ಇದುವರೆಗೆ ಪೊಲೀಸರು ಮೇಲ್ಮನವಿ ಸಲ್ಲಿಸಿಲ್ಲ. ಮೇಲ್ಮನವಿ ಸಲ್ಲಿಕೆಗೆ ತಡವಾಗುತ್ತಿರುವುದು ಯಾಕೆ ಎಂದು ಇಂದು ಕಮಿಷನರ್ ದಯಾನಂದ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಮೇಲ್ಮನವಿ ಸಲ್ಲಿಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರಕರಣದ ಸಂಬಂಧ ಎಲ್ಲಾ ದಾಖಲೆಗಳು ಕನ್ನಡದಲ್ಲಿವೆ. ಸುಪ್ರೀಂಕೋರ್ಟ್ ಗೆ ಸಲ್ಲಿಕೆ ಮಾಡಲು ಇಂಗ್ಲಿಷ್ ಗೆ ಭಾಷಾಂತರಿಸಬೇಕಾಗಿದೆ. ಭಾಷಾಂತರಿಸುವ ಕೆಲಸವಾಗುತ್ತಿದೆ.ಹೀಗಾಗಿ ತಡವಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ