ದರ್ಶನ್ ವಿರುದ್ಧ ಸುಪ್ರೀಂಕೋರ್ಟ್ ಗೆ: ಗೃಹಸಚಿವರ ಅಚ್ಚರಿಯ ಹೇಳಿಕೆ

Krishnaveni K

ಬುಧವಾರ, 13 ನವೆಂಬರ್ 2024 (12:21 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ವಿರುದ್ಧ ಪೊಲೀಸರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ವಿಚಾರ ಕುರಿತಂತೆ ಗೃಹಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಗೆ ತೀವ್ರ ಬೆನ್ನು ನೋವು ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಇತ್ತೀಚೆಗಷ್ಟೇ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಅದರಂತೆ ಜೈಲಿನಿಂದ ಹೊರಬಂದ ದರ್ಶನ್ ಈಗ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ದರ್ಶನ್ ಪ್ರಭಾವೀ ಆಗಿರುವ ಕಾರಣಕ್ಕೆ ಅವರನ್ನು ಜಾಮೀನನ ಮೇಲೆ ಬಿಡುಗಡೆ ಮಾಡಿದರೆ ಕೇಸ್ ನ ತನಿಖೆಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ತಕರಾರು ತೆಗೆದಿದ್ದು ಅವರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಗೃಹ ಇಲಾಖೆಗೆ ಅನುಮತಿ ಕೇಳಿದ್ದರು.

ಇದೀಗ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಪರಮೇಶ್ವರ್, ‘ಮೇಲ್ಮನವಿ ಸಲ್ಲಿಕೆಗೆ ವಿಳಂಬವಾಗಿಲ್ಲ. ಅವಕಾಶವಿದ್ದರೆ ಮೇಲ್ಮನವಿ ಸಲ್ಲಿಸಿ ಎಂದು ನಾನೂ ಹೇಳಿದ್ದೇನೆ. ಯಾವಾಗ ಸಲ್ಲಿಸಬೇಕು ಎಂಬುದನ್ನು ಗೃಹ ಇಲಾಖೆ ಕಾರ್ಯದರ್ಶಿ ತೀರ್ಮಾನಿಸುತ್ತಾರೆ. ಇಂಥ ಪ್ರಕರಣದಲ್ಲಿ ಪ್ರಕ್ರಿಯೆಗಳ ಪ್ರಕಾರವೇ ನಡೆಯಬೇಕಾಗುತ್ತದೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ