ಬೆಂಗಳೂರು: ನನ್ನ ಸಿನಿಮಾಗಳಲ್ಲಿರುವ ಒಳ್ಳೆಯ ಅಂಶಗಳನ್ನೂ ಬರೆಯಿರಿ, ಋಣಾತ್ಮಕ ಅಂಶಗಳನ್ನೇ ಬರೆದು ನನ್ನನ್ನು ಟಾರ್ಗೆಟ್ ಮಾಡಬೇಡಿ ಎಂದು ಸ್ಯಾಂಡಲ್ ವುಡ್ ನಟ ಯಶ್ ಪತ್ರಿಕಾಗೋಷ್ಟಿಯಲ್ಲಿಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ತಂಡದೊಂದಿಗೆ ಸುದ್ದಿಗೋಷ್ಠಿ ಮಾಡಿದ ಯಶ್ ನನಗೆ ದ್ವೇಷ ಬೇಕಾಗಿಲ್ಲ. ತಪ್ಪಿದಾಗ ತಿದ್ದಿ. ನನಗೆ ಬೇಜಾರಿಲ್ಲ. ಆದರೆ ನನ್ನ ಸಂತು ಚಿತ್ರದಲ್ಲಿ ಡೈಲಾಗ್ ಗಳ ಬಗ್ಗೆಯೇ ಹೆಚ್ಚು ಹೈಲೈಟ್ ಮಾಡಿದಿರಿ. ಆದರೆ ಆ ಚಿತ್ರದಲ್ಲಿ ಗಂಡ ಹೆಂಡತಿ ಸಂಬಂಧ ಹೇಗಿರಬೇಕು ಎಂದು ಸಂದೇಶ ಕೊಟ್ಟಿದ್ದೇವೆ. ಅದನ್ನು ಯಾರೂ ಹೇಳಿಲ್ಲ. ರಾಮಚಾರಿ ಚಿತ್ರದಲ್ಲೂ ನನ್ನ ಡೈಲಾಗ್ ಗಳನ್ನೇ ಹೈಲೈಟ್ ಮಾಡಿದಿರಿ. ನನ್ನ ಬಗ್ಗೆ ನೆಗೆಟಿವ್ ಆಗಿ ಟಾರ್ಗೆಟ್ ಮಾಡಿದಿರಿ ಎಂದು ಯಶ್ ತಮ್ಮನ್ನು ಟಾರ್ಗೆಟ್ ಮಾಡಿದ ಮಾಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದರು.
ಹಾಗಿದ್ದರೆ ಯಶ್ ಬೇಕೆಂದೇ ತಮ್ಮ ಸಿನಿಮಾ ಪ್ರಚಾರಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕ ಮಂಜು ಅವರು ಖಂಡಿತಾ ಮಾಧ್ಯಗಳ ಮುಂದೆ ಬರಲು ಸಿದ್ಧವಿದ್ದರು. ಆದರೆ ಕೆಲವರು ಈ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಬಂದರೆ ಬೇರೆ ಕೆಲವು ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ನಾವೇ ಈಗ ಮಾಧ್ಯಮದ ಮುಂದೆ ಪ್ರಮೋಷನ್ ಬೇಡ ಎಂದು ನಿರ್ಧರಿಸಿದೆವು.
ನಾನು ರೈತನ ಹೆಸರಿಟ್ಟುಕೊಂಡು ಗಿಮಿಕ್ ಮಾಡೋದಿಕ್ಕೆ ಬಂದಿಲ್ಲ. ಅಂತಹ ದುಡ್ಡು ಬೇಡ. ನಿಜವಾಗಿ ರೈತನ ಬಗ್ಗೆ ಕಾಳಜಿ ನನಗೆ ಇದೆ. ರೈತ ಸಂಘದವರನ್ನೂ ಭೇಟಿ ಮಾಡಿದ್ದೇನೆ. ಅಂತಹ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ದುಡ್ಡು ಒಂದೇ ನನಗೆ ಮುಖ್ಯವಲ್ಲ ಎಂದು ಯಶ್ ಹೇಳಿದರು.
ನನಗೆ ಮಾಧ್ಯಮಗಳ ಮೇಲೆ ಯಾವುದೇ ಧ್ವೇಷವಿಲ್ಲ. ಮಾಧ್ಯಮಗಳಿಂದಾಗಿಯೇ ನಾನು ಇಂದು ಇಷ್ಟರಮಟ್ಟಿಗೆ ಬೆಳೆದಿದ್ದೇನೆ. ಒಂದು ವೇಳೆ ನಾನು ಬರಲಿಲ್ಲ ಎಂದರೆ ಯಾಕೆ ಬಂದಿಲ್ಲ ಎಂದು ನೀವು ಪ್ರಶ್ನಿಸಬೇಕಿತ್ತು. ಆದರೆ ನಾನು ಯಾವುದಾದರೂ ವಿಷಯಕ್ಕೆ ಪ್ರತಿಕ್ರಿಯಿಸಲ್ಲ ಎಂದರೆ ಯಾಕೆ ನನ್ನ ಬಗ್ಗೆ ನೆಗೆಟಿವ್ ಆಗಿ ಬರೀತಾರೆ ಗೊತ್ತಿಲ್ಲ ಎಂದರು.
ನನಗೆ ಚಿತ್ರರಂಗದ ಯಾವುದೇ ಕಲಾವಿದರೊಂದಿಗೆ ಭಿನ್ನಾಬಿಪ್ರಾಯಗಳಿಲ್ಲ. ಸುದೀಪ್, ಉಪೇಂದ್ರ, ದರ್ಶನ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಎಲ್ಲಾ ಕಲಾವಿದರೂ ಬಂದಿರುವ ಪ್ರತಿಭಟನೆ ಕಾರ್ಯಕ್ರಮಗಳಿಗೆ ನಾನೂ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಶ್ ಜತೆಗೆ ರಾಧಿಕಾ ಪಂಡಿತ್, ನಿರ್ಮಾಪಕ ಕೆ. ಮಂಜು ಕೂಡಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ