ಭಾರತದ ಬಿಗ್‌ ಬ್ಯಾನರ್ ಜತೆ ಕೈ ಜೋಡಿಸಿದ ನಿಖಿಲ್‌ ಕುಮಾರಸ್ವಾಮಿ

ಮಂಗಳವಾರ, 5 ಸೆಪ್ಟಂಬರ್ 2023 (16:16 IST)
ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಈಚೆಗೆ ಸಿನಿಮಾಗಳಿಂದ ಕೊಂಚ ದೂರವೇ ಉಳಿದುಬಿಟ್ಟಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರದಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗಾಗಿ, ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡು, ರಾಜಕೀಯದತ್ತ ಮುಖ ಮಾಡಿದ್ದರು. ಆದರೆ ಇದೀಗ ಪುನಃ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ನಿಖಿಲ್ ರೆಡಿ ಆಗಿದ್ದಾರೆ. ಈ ಬಾರಿ ದೊಡ್ಡಮಟ್ಟದಲ್ಲೇ ಹವಾ ಮಾಡುವುದಕ್ಕೆ ನಿಖಿಲ್ ಸಜ್ಜಾಗಿದ್ದಾರೆ. ಅವರ ಮುಂದಿನ ಹೊಸ ಪ್ಯಾನ್ ಇಂಡಿಯಾ ಸಿನಿಮಾವನ್ನು ಸೌತ್ ಇಂಡಿಯಾದ ಬಿಗ್‌ ಬ್ಯಾನರ್‌ವೊಂದು ನಿರ್ಮಾಣ ಮಾಡಲಿದೆ.
 
ತಮಿಳುನಾಡಿನ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ನಿಖಿಲ್ ಕುಮಾರಸ್ವಾಮಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಇಂಥದ್ದೊಂದು ಟಾಕ್ ಕೇಳಿಬರುತ್ತಲೇ ಇತ್ತು. ಆದರೆ ಸಿನಿಮಾ ಮಾತ್ರ ಟೇಕ್ ಆಫ್ ಆಗಿರಲಿಲ್ಲ. ಆದರೆ ಈಗ ಅದಕ್ಕೆ ಮುಹೂರ್ತ ಕೂಡಿಬಂದಿದೆ. ಆಗಸ್ಟ್‌ 23ರಂದು ಲೈಕಾ ಪ್ರೊಡಕ್ಷನ್ಸ್ ಮತ್ತು ನಿಖಿಲ್ ಕಾಂಬಿನೇಷನ್‌ನ ಹೊಸ ಸಿನಿಮಾ ಸೆಟ್ಟೇರಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ.
ನಿಖಿಲ್ ಕುಮಾರಸ್ವಾಮಿ ಮೊದಲು ಬಣ್ಣ ಹಚ್ಚಿದ್ದು 'ಜಾಗ್ವಾರ್‌' ಸಿನಿಮಾಕ್ಕಾಗಿ. ಆ ಸಿನಿಮಾವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬಂದಿತ್ತು. ಆನಂತರ ಬಂದ ಸಿನಿಮಾಗಳ್ಯಾವುವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿರಲಿಲ್ಲ. ಆದರೆ ಈಗ ನಿಖಿಲ್ ಮತ್ತು ಲೈಕಾ ಪ್ರೊಡಕ್ಷನ್ಸ್‌ನ ಸಿನಿಮಾವು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲೇ ಸಿದ್ಧಗೊಂಡು ತೆರೆಗೆ ಬರಲಿದೆ. ಅಂದಹಾಗೆ, ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಅನ್ನೋದು ಈವರೆಗೂ ಗುಟ್ಟಾಗಿಯೇ ಉಳಿದಿದೆ. ಅಲ್ಲದೆ, ಈ ಸಿನಿಮಾಕ್ಕಾಗಿ ಯಾರೆಲ್ಲ ಕೆಲಸ ಮಾಡಲಿದ್ದಾರೆ ಎಂಬ ವಿಚಾರದಲ್ಲೂ ರಹಸ್ಯ ಕಾಯ್ದುಕೊಳ್ಳಲಾಗಿದೆ. ಆ.23ರಂದೇ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
 
2014ರಲ್ಲಿ ತೆರೆಕಂಡ 'ಕತ್ತಿ' ಮೂಲಕ ಸಿನಿಮಾ ನಿರ್ಮಾಣಕ್ಕೆ ಲೈಕಾ ಪ್ರೊಡಕ್ಷನ್ಸ್ ಎಂಟ್ರಿ ಕೊಟ್ಟಿತು. ಈವರೆಗೂ 20ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಿಸಿದೆ. ಇದರಲ್ಲಿ 'ಖೈದಿ ನಂ.150', '2.0', 'ವಡಾ ಚನ್ನೈ', 'ದರ್ಬಾರ್', 'ಡಾನ್‌', 'ಪೊನ್ನಿಯಿನ್ ಸೆಲ್ವನ್‌ 1 & 2' ಥರದ ಬಿಗ್ ಬಜೆಟ್ ಸಿನಿಮಾಗಳಿವೆ. 'ಸೂಪರ್ ಸ್ಟಾರ್' ರಜನಿಕಾಂತ್‌, ಕಮಲ್‌ ಹಾಸನ್‌, 'ಮೆಗಾ ಸ್ಟಾರ್' ಚಿರಂಜೀವಿ, 'ದಳಪತಿ' ವಿಜಯ್, ಧನುಷ್, ಸೂರ್ಯ, ವಿಕ್ರಮ್‌, ಕಾರ್ತಿ, ಶಿವಕಾರ್ತಿಕೇಯನ್ ಅವರಂತಹ ಸ್ಟಾರ್ ನಟರು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.
 
ಸದ್ಯ ಈ ಬ್ಯಾನರ್‌ನಲ್ಲಿ ಇಂಡಿಯನ್ 2, ಚಂದ್ರಮುಖಿ 2, ಲಾಲ್‌ ಸಲಾಮ್, ವಿಡಮುಯರ್ಚಿ ಥರದ ಬಹುನಿರೀಕ್ಷಿತ ಸಿನಿಮಾಗಳು ತಯಾರಾಗುತ್ತಿವೆ. ಈಗ ನಿಖಿಲ್ ಸಿನಿಮಾ ಕೂಡ ಇದೇ ಬ್ಯಾನರ್‌ನಲ್ಲೇ ಸೆಟ್ಟೇರುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ತಮಿಳಿನ ಜೊತೆಗೆ ತೆಲುಗು, ಹಿಂದಿಯಲ್ಲೂ ಸಿನಿಮಾ ನಿರ್ಮಿಸಿದೆ. ನಿಖಿಲ್ ಸಿನಿಮಾದ ಮೂಲಕ ಈಗ ಕನ್ನಡಕ್ಕೂ ಎಂಟ್ರಿ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ