'ನೆನಪಿರಲಿ' ಚಿತ್ರದಲ್ಲಿ ಚಿತ್ರಸಂಗೀತ ಪ್ರಿಯರಿಗೆ ಮೋಡಿ ಮಾಡಿದ್ದ ಹಂಸಲೇಖಾ-ರತ್ನಜ ಜೋಡಿಯು, ತಕ್ಕ ಮಟ್ಟಿನ ಗಮನ ಸೆಳೆದಿದ್ದ 'ಹೊಂಗನಸು' ಚಿತ್ರದ ಬಳಿಕ ಮತ್ತೊಮ್ಮೆ ಒಂದಾಗಿ, ಪ್ರೇಮಿಸಂ ಮೂಲಕ ಬಹುನಿರೀಕ್ಷೆ ಹುಟ್ಟಿಸಿದ್ದಾರೆ. ಬಹಳ ದಿನಗಳ ಬಳಿಕ ಅಮೂಲ್ಯ ತೆರೆಯ ಕಾಣಿಸಿಕೊಳ್ಳಲು ಕಾರಣವಾದ ಪ್ರೇಮಿಸಂ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಕಂಡಿದೆ.
ತಾವೇ ಸ್ವತಃ ಚಿತ್ರಕಥೆ ಬರೆದು ನಿರ್ದೇಶಿಸಿರುವ ರತ್ನಜ ಅವರು ಹಂಸಲೇಖಾರೊಂದಿಗೆ ಈ ಬಾರಿ ಬಹಳ ಮುತುವರ್ಜಿ ವಹಿಸಿ, ಸಾಕಷ್ಟು ತಯಾರಿ ಮಾಡಿಕೊಂಡೇ ಪ್ರೇಮಿಸಂ ಮೂಲಕ ಕಣಕ್ಕಿಳಿದಿದ್ದಾರೆ. ತರುಣ ಹೃದಯಗಳ ಭಾವನೆಗಳನ್ನು ದೃಶ್ಯಗಳ ಮೂಲಕ ಸೆರೆಹಿಡಿಯಲು ಪ್ರಯತ್ನಿಸಿದ್ದು, ಅಮೂಲ್ಯ ಅವರಂತೂ ಪಾತ್ರ ವೈವಿಧ್ಯದಿಂದ ಹಾಗೂ ವಿಭಿನ್ನ ಗೆಟಪ್ಗಳ ಮೂಲಕ ಗಮನ ಸೆಳೆದಿದ್ದಾರೆ.
ಪೊಲೀಸ್ ಪಡೆಯಲ್ಲಿ ಕೆಲಸ ಮಾಡುವ ಗೆಳೆಯರ ಪುತ್ರರಿಬ್ಬರು (ಹೊಸಬರಾದ ವರುಣ್ ಮತ್ತು ಚೇತನ್ ಚಂದ್ರ) ಒಬ್ಬ ನಾಯಕಿಯ ಸುತ್ತ ಸುತ್ತುತ್ತಾ, ಪ್ರೇಮ ನಿವೇದನೆಗಾಗಿ ತಮ್ಮ ಪ್ರತಿಭೆ ತೋರ್ಪಡಿಸಿಕೊಳ್ಳಲು ಪ್ರಯತ್ನಿಸುವುದು ಚಿತ್ರಕಥೆಯ ಸಾರಾಂಶ. ನಾಯಕಿಯ ಸಹೋದರನ ಪಾತ್ರಕ್ಕೆ ನೀನಾಸಂ ಅಶ್ವತ್ಥ್ ಜೀವ ತುಂಬಿದ್ದಾರೆ.
ಅಜಯ್ ಗೌಡ ನಿರ್ಮಾಣದ ಈ ಚಿತ್ರದಲ್ಲಿ, ಪೋಷಕ ಪಾತ್ರದಲ್ಲಿ ಅವಿನಾಶ್, ಅನಂತನಾಗ್, ಕಾಶಿ, ಸತ್ಯಜಿತ್, ಶರಣ್, ಮುಂತಾದವರು ಗಮನ ಸೆಳೆಯುತ್ತಾರೆ.
ಟೈಟಲ್ ಸಾಂಗ್ ಜೊತೆಗೆ 'ಲವ್ಲಿ ಕೆನ್ನೆಗೆ ಚುಮ್ ಚುಮಾ, ಶರಾಬಿ ಕಣ್ಣಿಗೆ ಚುಮ್ ಚುಮಾ, ಚಿತ್ತಾರದ ಚೆಲುವಿಗೆ ಚುಮ್ ಚುಮಾ' ಹಾಗೂ 'ನೈಸ್ ನೈಸ್' ಹಾಡುಗಳು ನೆನಪಿನಲ್ಲುಳಿಯಬಹುದು.
ಹಲವು ಕಾಲದ ನಂತರ ಮರಳಿರುವ ಹಂಸಲೇಖಾ ಚಿತ್ರಕ್ಕೆ ಸಾಹಿತ್ಯ-ಸಂಗೀತ ನೀಡಿದ್ದರೂ, ಶೀರ್ಷಿಕೆ ಗೀತೆಯನ್ನು ಕೇಳಿದವರಿಗೆ ಹಿಂದಿ, ತಮಿಳಿನಲ್ಲಿ ಬಂದಿರುವ ಹಾಡಿನ ಟಚ್ ನೆನಪಾಗುವುದು ಖಂಡಿತ. ಇದರೊಂದಿಗೆ ರತ್ನಜ ಅವರ ನಿರ್ದೇಶನಕ್ಕಿಂತಲೂ ಚಿತ್ರಕಥೆಯೇ ಒಂದು ಕೈ ಮೇಲೆ ಅನ್ನಿಸಬಹುದು ಯುವ ಪ್ರೇಕ್ಷಕರಿಗೆ. ಕ್ಲೈಮಾಕ್ಸ್ನಲ್ಲಿ ಹೊಸತನ ಇರುವುದು ರತ್ನಜ ಅವರ ಮುತುವರ್ಜಿಗೆ ಸಾಕ್ಷಿ. ಒಟ್ಟಿನಲ್ಲಿ ಕುಟುಂಬ ಸಮೇತ ನೋಡಬಹುದಾದ ನೀಟ್ ಆಗಿರೋ ಚಿತ್ರ ಎನ್ನಬಹುದು.
ಚಿತ್ರದ ಊಟಕ್ಕೆ ನೆಂಚಿಕೊಳ್ಳಲು ಒಂದಿಷ್ಟು ಹಾಸ್ಯವೂ ಇದೆ. ಮೊದಲರ್ಧ ರಂಜನೀಯವಾಗಿ ಸಾಗುತ್ತದೆ. ಪೊಲೀಸ್ ಕಮಿಶನರ್ ಮತ್ತು ಹೆಡ್ ಕಾನ್ಸ್ಟೇಬಲ್ ನಡುವಣ ಗೆಳೆತನದ ಭಾವನಾತ್ಮಕತೆಯನ್ನು ಅನಂತನಾಗ್ ಮತ್ತು ಅವಿನಾಶ್ ಸಮರ್ಥವಾಗಿ ಬಿಂಬಿಸಿದ್ದಾರೆ.
ಹಂಸಲೇಖಾ ಅವರ ಸಂಗೀತ ಕೆಲವೆಡೆ ಗಮನ ಸೆಳೆಯುವುದಿಲ್ಲ. ದ್ವಿತೀಯಾರ್ಧದ ಆರಂಭವು ಪ್ರೇಕ್ಷಕರಿಗೆ ತೀರಾ ಎಳೆಯುತ್ತಿದೆ ಅನ್ನಿಸಬಹುದು. ಮತ್ತೆ ಅಮೂಲ್ಯ ಬಾಯಲ್ಲಿ ಬರುವ ಕೆಲವೊಂದು ಸಂಭಾಷಣೆಗಳು ಪಿಯುಸಿ ಓದುವ ಹುಡುಗಿಗೆ 'ಅತಿ'ಯಾಯಿತು ಅನ್ನಿಸುತ್ತದೆ. ಚಿತ್ರಕಥೆ ಯುವ ಹೃದಯಗಳಿಗೆ ಹತ್ತಿರವಾಗುತ್ತದೆ. ಅಮೂಲ್ಯ ಅವರ ನಟನೆಯೂ ಈ ಚಿತ್ರದ ಪ್ಲಸ್ ಪಾಯಿಂಟ್ಗಳಲ್ಲೊಂದು. ಇದೀಗ ರತ್ನಜ ಅವರು ಹೊಸ ಪ್ರೇಮ ಸಿದ್ಧಾಂತವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ? ಕಾದು ನೋಡಿ.