ಮುಖದಲ್ಲಿ ಸರಿಯಾಗಿ ಇನ್ನೂ ಮೀಸೆ ಮೂಡದ ಬಾಲಕನೋರ್ವ ಪ್ರೀತಿಗಾಗಿ ಲಾಂಗ್ ಹಿಡಿದು ಕೊಚ್ಚುವ ಚಿತ್ರ ಬಾಬಾ ಪ್ರೇಕ್ಷಕ ವರ್ಗದಿಂದ ಹೆಚ್ಚೇನು ಪ್ರಶಂಸೆಗೊಳಪಡಲಿಲ್ಲ. ನಿರ್ದೇಶಕ ತ್ರಿಶೂಲ್ ಒಂದು ಸಣ್ಣಮಟ್ಟದ ಕಥಾವಸ್ತುವನ್ನು ಆಯ್ಕೆ ಮಾಡಿದ್ದಾರೆ. ಜಾಳು ಜಾಳಾದ ನಿರೂಪಣೆ ಚಿತ್ರದ ಕಡೆಯವರೆಗೂ ಪ್ರೇಕ್ಷಕನಿಗೆ ಕಿರಿಕ್ ಉಂಟು ಮಾಡುತ್ತದೆ.
ನಾಯಕ ಕಾರ್ತಿಕ್ ಮಾತಿನಲ್ಲಿ ಎಡವಿದ್ದರೂ ತನಗಿದ್ದ ಅವಕಾಶದಲ್ಲಿ ನಾಯಕನಂತೆ ಅಭಿನಯಿಸಲು ಪ್ರಯತ್ನಿಸಿದ್ದಾರೆ. ನೃತ್ಯ ಹಾಗೂ ಫೈಟ್ ದೃಶ್ಯಗಳಲ್ಲಿ ಕಾರ್ತೀಕ್ ಅಭಿನಯ ಚೆನ್ನಾಗಿ ಮೂಡಿಬಂದಿದೆ. ನಾಯಕಿ ಪ್ರಜ್ಞಾ ಗೊಂಬೆಯಂತೆ ಬಂದು ಹೋಗುತ್ತಾಳೆ ಹೊರತು ಅದಕ್ಕಿಂತ ಹೆಚ್ಚಿನದ್ದೇನು ಮಾಡಿಲ್ಲ. ಚಿತ್ರದಲ್ಲಿ ಬರುವ ಸುನೀಲ್ ಅವರ ಹಾಸ್ಯ ಪಾತ್ರ ತೀರಾ ಕೆಟ್ಟದಾಗಿದೆ.
ಬಾಬಾ(ಕಾರ್ತಿಕ್) ಹೆಸರು ಗಳಿಸಲು ರೌಡಿಸಂ ಒಂದು ಸೂಕ್ತ ಮಾರ್ಗ ಎಂದು ನಂಬಿ ಅದನ್ನು ಮಾಡಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಅವನಿಗೆ ಇಂದು(ಪ್ರಜ್ಞಾ) ಎಂಬಾಕೆಯೊಂದಿಗೆ ಪ್ರೀತಿ ಶುರುವಾಗುತ್ತದೆ. ಪ್ರೀತಿಗಾಗಿ ಬಾಬಾ ಪ್ರಾಣ ಕೊಡಲು ಹಾಗೂ ಪ್ರಾಣ ತೆಗೆಯಲು ಸಿದ್ಧನಿರುತ್ತಾನೆ. ಇಂತಿಪ್ಪ ಬಾಬಾನಿಗೆ ಆಸ್ಪತ್ರೆ ಶವಾಗಾರದಲ್ಲಿ ಶವಕಾಯುವ ಕೆಲಸ ಸಿಗುತ್ತದೆ. ತನ್ನ ಕೆಲಸದ ಮೊದಲ ದಿನವೇ ಶವಪರೀಕ್ಷೆಗೆಂದು ಬಂದ ಶವದ ಕೂದಲನ್ನು ತೆಗೆಯುವ ಕೆಲಸವನ್ನು ಬಾಬಾನಿಗೆ ವಹಿಸಲಾಗುತ್ತದೆ. ಆದರೆ ಶವದ ಮೇಲಿನ ಬಟ್ಟೆಯನ್ನು ಸರಿಸಿ ನೋಡಿದಾಗ ಅದು ಆತನ ಪ್ರಿಯತಮೆ ಇಂದುವಿನ ದೇಹವಾಗಿರುತ್ತದೆ. ಹೀಗೆ ಚಿತ್ರ ಅಡ್ಡಾದಿಡ್ಡಿ ಸಾಗುತ್ತದೆ.
ಚಿತ್ರದಲ್ಲಿ ರಮೇಶ್ ಭಟ್ ಹಾಗೂ ಪದ್ಮಾವಾಸಂತಿ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಅರ್ಜುನ್ ಸಂಗೀತ ಸಾಧಾರಣ. ಉತ್ತಮ ನಿರ್ದೇಶಕರ ಕೈಯಲ್ಲಿ ಸಿಕ್ಕರೆ ಕಾರ್ತಿಕ್ ಒಳ್ಳೆಯ ನಟನಾಗಬಲ್ಲ.