ಕಾಮನ ಬಿಲ್ಲು

ಕಾಮನ ಬಿಲ್ಲು ಹೇಗೆ ಮೂಡುವುದು
ಎಂದು ಕಂಡರೆ ತಿಳಿದಿಹಿರಾ ?
ಇದರ ಮರ್ಮವಾ ತಿಳಿಯುವ ಬಯಕೆ
ನೀವು ಮನದಲಿ ತಳೆದಿಹಿರ ?

ಮಳೆಯ ಕಾಲದಲಿ ನೀರಿನ ಹನಿಗಳು
ವಾಯುವಿನಲ್ಲಿ ತೇಲುವುವು
ಸೂರ್ಯನ ಕಿರಣವು ಇದರಲಿ ತೂರಿ
ವಕ್ರೀಭವಿಸುತ ವಾಲುವುವು.

ರವಿಯ ಕಿರಣವು ತನ್ನಯ ಮಡಿಲಲಿ
ಏಳು ಬಣ್ಣಗಳ ಹೊಂದಿಹುದು
ನೇರಳೆ, ನೀಲಿ ಕೇಸರಿ ಊದಾ
ಹಸಿರು ಹಳದಿ ಕೆಂಪೆಂದಿಹುದು.

ಸೂರ್ಯನ ಕಿರಣವು ಹನಿಯಲಿ ತೂರಲು
ಒಳಗಿಹ ಬಣ್ಣವು ಬೇರ್ಪಡಿಸಿ
ನಮ್ಮಯ ಕಣ್ಣಿಗೆ ಬಿಲ್ಲೊಲು ಕಾಂಬುದು
ಕಾಮನ ಬಿಲ್ಲೆನೆ ಮಾರ್ಪಡಿಸಿ

ಕಾಮನ ಬಿಲ್ಲು ಕಾಂಬರ ಕಣ್ಣಿಗೆ
ಸೃಷ್ಟಿಯು ನೀಡಿಹ ವರದಾನ
ಚಿತ್ರಕಾರನು ಅವನು ಬರೆಯದೆ
ಗಗನಕೆ ಸಂದಹ ಸನ್ಮಾನ

-ಗುರುರಾಜ ಬೆಣಕಲ್

ವೆಬ್ದುನಿಯಾವನ್ನು ಓದಿ