ಚಿನ್ಮಯಿ ಅವಳ ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಬೇಸಿಗೆ ರಜೆ ಸಿಕ್ಕಿದ ಕೂಡಲೇ ಅವಳು ಅವಳ ಅಜ್ಜನ ಮನೆಗೆ ಹೋಗುತ್ತಿದ್ದಳು.ಅವಳ ಅಜ್ಜ ಮತ್ತು ಅಜ್ಜಿ ಅವಳನ್ನು ಪ್ರೀತಿಯಿಂದ ಚಿನ್ನು ಎಂದೇ ಕರೆಯುತ್ತಿದ್ದರು.
ಅಜ್ಜನ ಮನೆಯಲ್ಲಿ ಒಂದು ದೊಡ್ಡ ಮಾವಿನ ಮರವಿತ್ತು. ಆ ಮರದ ಮೇಲೆ ಚಿನ್ನುಗೆ ಅತೀವ ಪ್ರೀತಿ.ಅದರಲ್ಲಿ ಆಗುವ ಮಾವಿನ ಹಣ್ಣುಗಳನ್ನು ತಿನ್ನುವುದು, ಆ ಮರದ ಕೆಳಗೆ ಆಟವಾಡುವುದು ಅಂದರೆ ಚಿನ್ನುಗೆ ತುಂಬಾ ಇಷ್ಟ. ಅದಕ್ಕಾಗಿಯೇ ಅವಳು ಅಜ್ಜನ ಮನೆಗೆ ಹೋಗುತ್ತಿದ್ದದ್ದು.
ಆ ಮರವು ತುಂಬಾ ಹಳೆಯದಾಗಿತ್ತು ಹಾಗೂ ತುಂಬಾ ದೊಡ್ಡದಾಗಿತ್ತು. ಅಜ್ಜನ ಮನೆಯ ಬಳಿ ಒಬ್ಬ ರಾಮು ಅಂತ ಇದ್ದ ಅವನಿಗೆ ಯಾವತ್ತೂ ಆ ಮರದ ಮೇಲೆ ಕಣ್ಣು. ಆ ಮರವನ್ನು ಕಡಿದು ಮಾರಿದರೆ ಎಷ್ಟೊಂದು ಹಣ ಸಿಗಬಹುದು ಎಂಬುದು ಅವನ ಯೋಚನೆಯಾಗಿತ್ತು. ಈ ವಿಷಯದ ಬಗ್ಗೆ ಅವನು ಅಜ್ಜನಲ್ಲಿ ಅನೇಕ ಬಾರಿ ಹೇಳಿದ್ದ ಆದರೆ ಅಜ್ಜ ಆ ಮರವನ್ನು ಕಡಿಯುವುದಕ್ಕೆ ಒಪ್ಪುತ್ತನೇ ಇರಲಿಲ್ಲ.
ಆ ವರ್ಷ ಬಂದ ತೀವ್ರವಾದ ಮಳೆ ಗಾಳಿಗೆ ಆ ಮಾವಿನ ಮರದ ಒಂದು ಭಾಗವು ಬಿದ್ದು ಹೋಯಿತು. ಇದೇ ಸಂದರ್ಭವನ್ನು ಕಾಯುತ್ತಿದ್ದ ರಾಮು ಅಜ್ಜನಲ್ಲಿ ಬಂದು,ಈಗಾಗಲೇ ಒಂದು ಭಾಗ ಬಿದ್ದು ಹೋಗಿದೆ, ಇನ್ನೊಂದು ಭಾಗವು ಸದ್ಯಕ್ಕೆ ಬಿದ್ದು ಹೋಗುತ್ತದೆ ಈಗಲಾದರೂ ಅದನ್ನು ಮಾರಿಬಿಡಿ ಎಂದು ಹೇಳುತ್ತಾನೆ. ಈಗ ಅಜ್ಜನಿಗೂ ಅದು ಸರಿ ಎನಿಸಿ ಆ ಮರವನ್ನು ಕಡಿದು ಮಾರುತ್ತಾರೆ.
ಆ ವರ್ಷ ಬೇಸಿಗೆ ರಜೆ ಪ್ರಾರಂಭವಾದಾಗ ಚಿನ್ನು ಬಹಳ ಖುಷಿಯಿಂದಲೇ ಅಜ್ಜನ ಮನೆಗೆ ಬರುತ್ತಾಳೆ. ಆದರೆ ಅಜ್ಜನ ಮನೆಗೆ ಬರುವಾಗ ಅವಳ ಖುಷಿಯೆಲ್ಲಾ ಮಾಯವಾಗಿರುತ್ತದೆ ಯಾಕೆಂದರೆ ಅವಳ ಪ್ರೀತಿಯ ಮಾವಿನ ಮರವೇ ಅಲ್ಲಿರುವುದಿಲ್ಲ.
ಅವಳು ಅಜ್ಜನಲ್ಲಿ ಮಾವಿನ ಮರ ಎಲ್ಲಿ ಹೋಯ್ತು ಎಂದು ಕೇಳಿದಾಗ ಅಜ್ಜ ಅದು ಮರಕ್ಕೆ ತುಂಬಾ ಹಳೆಯದಾಗಿ ಅರ್ಧ ಭಾಗ ಬಿದ್ದು ಹೋಗಿತ್ತಲ್ಲ ಅದಕ್ಕೆ ಪೂರ್ತಿ ಕಡಿದು ಮಾರಿದೆ ಎಂದು ನಡೆದ ಸಂಗತಿಯನ್ನು ಚಿನ್ನುಗೆ ತಿಳಿಸುತ್ತಾರೆ. ಇದನ್ನು ಕೇಳಿ ಚಿನ್ನುಗೆ ತುಂಬಾ ಬೇಸರವಾಗುತ್ತದೆ.
ಆಗ ಅವಳು ಅಜ್ಜನಿಗೆ, ನಿಮಗೆ ಅದರ ಮೇಲೆ ಪ್ರೀತಿಯೇ ಇಲ್ಲ, ಇಷ್ಟು ಸಮಯ ಅದು ಕೊಡುತ್ತಿದ್ದ ಹಣ್ಣುಗಳನ್ನು ತಿನ್ನುತ್ತಿದ್ದೆವು ಆದರೆ ಈಗ ಅದು ಬಿದ್ದು ಹೋಯ್ತು ಅಂದ ಕೂಡಲೇ ಮಾರಿಬಿಡುವುದಾ? ಹಾಗಾದರೇ ಮನುಷ್ಯರನ್ನು ಕೂಡಾ ಹಾಗೆಯೇ ಮಾಡಬಹುದಲ್ವ ಎಂದು ಹೇಳಿ, ಬೇಜಾರಲ್ಲಿ ನಾನು ಇನ್ನು ಮುಂದೆ ರಜೆಯಲ್ಲಿ ನಿಮ್ಮ ಮನೆಗೆ ಬರುವುದೇ ಇಲ್ಲ ಎಂದು ತನ್ನ ಮನೆಗೇ ಹಿಂತಿರುಗುತ್ತಾಳೆ. ಅಜ್ಜ ಮತ್ತು ಅಜ್ಜಿ ಎಷ್ಟು ಕೇಳಿದರೂ ನಿಲ್ಲುವುದೇ ಇಲ್ಲ.
ಚಿನ್ನು ತನ್ನ ಮನೆಗೆ ವಾಪಾಸಾಗಿದ್ದು ಅಜ್ಜನಿಗಂತೂ ತುಂಬಾ ಬೇಜಾರಾಗಿರುತ್ತದೆ. ಅನೇಕ ಪಕ್ಷಿಗಳಿಗೆ ಆಶ್ರಯವನ್ನು ನೀಡುತ್ತಿದ್ದ,ತುಂಬಾ ಹಣ್ಣುಗಳನ್ನು ನೀಡುತ್ತಿದ್ದ ಆ ಮರದ ಉಪಕಾರವನ್ನು ಪಡೆದು, ಈಗ ಅದು ಉಪಯೋಗವಿಲ್ಲ ಎಂದಾಗ ಅದನ್ನು ಮಾರುವುದು ನಿಜಕ್ಕೂ ತಪ್ಪು.ಅಷ್ಟು ಚಿಕ್ಕವಳಿಗೆ ಬಂದ ಯೋಚನೆ ನನಗೆ ಯಾಕೆ ಬರಲಿಲ್ಲ, ಚಿನ್ನು ಹೇಳಿದ್ದು ಎಷ್ಟು ಸತ್ಯ, ಚಿನ್ನುವನ್ನು ಹೇಗಾದರೂ ಮಾಡಿ ಮತ್ತೆ ಹಿಂತಿರುಗಿ ಬರುವಂತೆ ಮಾಡಬೇಕೆಂದು ಯೋಚಿಸಿ ಕೊನೆಗೂ ಒಂದು ನಿರ್ಧಾರಕ್ಕೆ ಬರುತ್ತಾರೆ.
ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗುತ್ತದೆ.ಅಜ್ಜ ಪೇಟೆಗೆ ಹೋಗಿ ಒಂದು ಮಾವಿನ ಗಿಡವನ್ನು ತಂದು ಕಡಿದು ಹಾಕಿದ ಮರದ ಜಾಗದಲ್ಲೇ ನೆಡುತ್ತಾರೆ. ನೆಟ್ಟ ಮರುದಿವಸವೇ ಚಿನ್ನುವಿನ ಮನೆಗೆ ಹೋಗಿ ಅವಳನ್ನು ಮನೆಗೆ ಬರುವಂತೆ ಹೇಳುತ್ತಾರೆ.
ಆದರೆ ಚಿನ್ನುಗೆ ಆಗ ಶಾಲೆ ಪ್ರಾರಂಭವಾಗಿರುತ್ತದೆ ಆದುದರಿಂದ ಅವಳುಬರುವುದಿಲ್ಲ ಎಂದು ಹೇಳಿದರೂ, ಅಜ್ಜ ಚಿನ್ನುವನ್ನು ಮತ್ತು ಅವಳ ಅಪ್ಪ ಅಮ್ಮನನ್ನು ಕರೆದುಕೊಂಡು ತನ್ನ ಮನೆಗೆ ಹೋಗುತ್ತಾರೆ.
ತಾನು ನೆಟ್ಟ ಗಿಡದ ಬಳಿ ಚಿನ್ನುವನ್ನು ಕರೆದುಕೊಂಡು ಹೋಗಿ, ನಿನಗಾಗಿ ಹೊಸ ಮಾವಿನ ಗಿಡವನ್ನು ತಂದು ನೆಟ್ಟಿದ್ದೇನೆ,ಇದು ದೊಡ್ಡದಾಗಿ ಮೊದಲಿನ ರೀತಿಯಲ್ಲೇ ನಿನಗೆ ಹಣ್ಣುಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ.
ಚಿನ್ನುವಿನ ಅಪ್ಪ ಅಮ್ಮನಿಗೆ ಒಂದೂ ಅರ್ಥ ಆಗಿರುವುದಿಲ್ಲ, ಅವರು ಇದೆಲ್ಲ ಏನು ಎಂದು ಕೇಳಿದಾಗ ಅಜ್ಜ ಅವರಲ್ಲಿ ಚಿನ್ನು ನನ್ನ ಕಣ್ಣು ತೆರೆಸಿದ್ದಾಳೆ, ಅವಳೆದುರು ನಾನು ತುಂಬಾ ಚಿಕ್ಕವನಾದೆ ಎಂದು ನಡೆದ ವಿಷಯವನ್ನು ಚಿನ್ನುವಿನ ಅಪ್ಪ ಅಮ್ಮನಿಗೆ ತಿಳಿಸುತ್ತಾರೆ.
ಅಜ್ಜ ಮತ್ತು ಅಜ್ಜಿ ಚಿನ್ನುವಿನಲ್ಲಿ ಇನ್ನು ಮುಂದೆ ಮೊದಲಿನ ರೀತಿಯಲ್ಲೇ ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಬರುತ್ತೀಯಲ್ಲಾ ಎಂದು ಕೇಳಿದಾಗ ಚಿನ್ನು, ನೀವು ಯಾವತ್ತೂ ಆ ಮರವನ್ನು ಕಡಿಯುವುದಿಲ್ಲ ಎಂದು 'ಪ್ರಾಮಿಸ್' ಮಾಡಿದರೆ ಖಂಡಿತಾ ಬರುತ್ತೇನೆ ಎನ್ನುತ್ತಾಳೆ.