ಕಷ್ಟ ಪಟ್ಟರೆ ಸೂಕ್ತ ಪ್ರತಿಫಲ

ಒಂದು ದಿನ ರಾಮುವಿಗೆ ಕನಸಿನಲ್ಲಿ ಒಬ್ಬ ಮುದಿಯ ಬಂದು ಮನೆಯ ಹಿತ್ತಲಿನಲ್ಲಿ ತಾಳೆ ಮರದ ಕೆಳಗೆ ನಿಧಿ ಇದೆ ಎಂದು ಹೇಳುತ್ತಾನೆ. ಮಾರನೇ ದಿನ ರಾಮು ಹಿತ್ತಲಿಗೆ ಹೋಗಿ ಆ ತಾಳೆ ಮರದ ಕೆಳಗೆ ಅಗೆಯಲು ಪ್ರಾರಂಭಿಸುತ್ತಾನೆ. ರಾಮು ಮಣ್ಣು ಅಗೆಯಲು ಪ್ರಾರಂಭಿಸುತ್ತಾನೆ. ಮಣ್ಣು ಅಗೆದು ಅಗೆದು ಮೇಲೆ ರಾಡಿ ರಾಶಿಯಾಗುತ್ತಾ ಹೋಗುತ್ತದೆ.

ರಾಮು ಅಗೆಯುತ್ತಾ ಹೋಗುತ್ತಾನೆ. ಆದರೆ ಎಷ್ಟೇ ಅಗೆದರೂ ರಾಮುವಿಗೆ ನಿಧಿ ಸಿಗುವುದಿಲ್ಲ. ರಾಮು ಹಿಡಿದ ಛಲ ಬಿಡದಂತೆ ಅಗೆಯುವ ಕೆಲಸವನ್ನು ಮುಂದುವರಿಸುತ್ತಾನೆ.

ಹೀಗೆ ಬಹು ಆಳದವರೆಗೆ ಅಗೆಯುತ್ತಾನೆ. ಮಣ್ಣಿನ ರಾಶಿ ದೊಡ್ಡದಾಗುತ್ತಾ ಹೋಗುತ್ತದೆ. ಆದರೆ ನಿಧಿಯ ಯಾವುದೇ ಕುರುಹು ಸಿಗುವುದಿಲ್ಲ. ಅಂತಿಮವಾಗಿ ರಾಮುವಿಗೆ ಒಂದು ಕಲ್ಲು ಸಿಗುತ್ತದೆ ಅಷ್ಟೇ. ಇದನ್ನು ನೋಡಿ ರಾಮು ಬಹಳ ನಿರಾಶೆಗೊಳ್ಳುತ್ತಾನೆ. ನಿನ್ನೆ ಕನಸಿನಲ್ಲಿ ಆ ಮುದಿಯ ನನಗೆ ಸುಳ್ಳು ಹೇಳಿದ್ದಾನೆ ಎಂದು ಹಲುಬುತ್ತಾನೆ ಮತ್ತು ಮುದಿಯನಿಗೆ ಬಯ್ಯುತ್ತಾನೆ.

ರಾಮು ಬೇಸರದಿಂದ ಆಯಾಸದಿಂದ ಕೂರುತ್ತಾನೆ. ರಾಮುವಿನ ತಾಯಿ ಬಂದು ಆ ಹೊಂಡವನ್ನು ನೋಡುತ್ತಾಳೆ. ಅದನ್ನು ಕಂಡು ಅವಳಿಗೆ ಬಹಳ ಸಂತೋಷವಾಗುತ್ತದೆ. ಮತ್ತು ರಾಮುವನ್ನು ತನ್ನ ಎರಡೂ ಕೈಗಳಿಂದ ಅಪ್ಪಿ ಹಿಡಿದು ರಾಮು ನಾನು ಹಲವು ದಿನಗಳಿಂದ ಈ ಸ್ಥಳದಲ್ಲಿ ಒಂದು ಗಿಡವನ್ನು ನೆಡಲು ಯೋಚಿಸುತ್ತಿದ್ದೆ, ಆದರೆ ಅದಕ್ಕಾಗಿ ನಾನು ಹೊಂಡವನ್ನು ಮಾಡಬೇಕಾಗಿತ್ತು. ಅದು ನನ್ನಿಂದ ಅಸಾಧ್ಯವಾಗಿತ್ತು. ಹಾಗಾಗಿ ನನ್ನ ಆಶೆ ಫಲಕಾರಿಯಾಗದೆ ಹಾಗೇ ಉಳಿದಿತ್ತು. ಆದರೆ ನೀನು ಇಂದು ನನ್ನ ಆಶೆಯನ್ನು ಪೂರೈಸಿದೆ. ನೀನು ಈ ಹೊಂಡವನ್ನು ತೋಡಿ ನನ್ನ ಎದುರಿದ್ದ ದೊಡ್ಡ ಸಮಸ್ಯೆಯನ್ನು ನಿವಾರಿಸಿದೆ ಎಂದು ಹೇಳಿ ಆತನ ಕೈಗೆ ಬಹುಮಾನವಾಗಿ 100 ರೂಪಾಯಿಯನ್ನು ನೀಡುತ್ತಾಳೆ.

ತನಗೆ ನಿಧಿ ಸಿಕ್ಕಿಲ್ಲ ಎಂಬ ಬೇಸರದಿಂದ ಇದ್ದ ರಾಮು ಈ 100 ರೂಪಾಯಿ ಬಹುಮಾನವನ್ನು ಕಂಡು ಸಂತೋಷ ಪಡುತ್ತಾನೆ. ಆ 100 ರೂಪಾಯಿಯಿಂದ ರಾಮು ತನಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಸಂತೋಷ ಪಡುತ್ತಾನೆ.

ಕಷ್ಟ ಪಟ್ಟರೆ ಪ್ರತಿಫಲ ದೊರೆಯುತ್ತದೆ ಎಂಬುದು ಇದರಿಂದ ನಮಗೆ ತಿಳಿಯುತ್ತದೆ.

ವೆಬ್ದುನಿಯಾವನ್ನು ಓದಿ