ತಪ್ಪಿತಸ್ಥರ ರಕ್ಷಣೆಗಾಗಿ ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್: ಆರ್‌.ಅಶೋಕ್ ಆಕ್ರೋಶ

Sampriya

ಶನಿವಾರ, 6 ಏಪ್ರಿಲ್ 2024 (15:08 IST)
ಬೆಂಗಳೂರು: ಸಾಕ್ಷಿ ವಿಚಾರಣೆಗೂ, ಆರೋಪಿ ವಿಚಾರಣೆಗೂ ವ್ಯತ್ಯಾಸ ತಿಳಿಯದ ಕಾಂಗ್ರೆಸ್ ಪಕ್ಷ ಜನರ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಚೆಗೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಬಿಜೆಪಿ ಮುಖಂಡನ ವಿಚಾರಣೆಗೆ ಒಳಪಡಿಸಿದ್ದಕ್ಕೆ ಕಾಂಗ್ರೆಸ್ ಕೇಸರಿ ಪಡೆ ಮೇಲೆ ಗಂಭೀರ ಆರೋಪ ಮಾಡಿತ್ತು. ಇದರ ಬೆನ್ನಲ್ಲೇ ಎನ್‌ಐಎ ಸ್ಪಷ್ಟನೆ ನೀಡಿ ಬಿಜೆಪಿ ಮುಖಂಡನನ್ನು ಸಾಕ್ಷಿ ಸಲುವಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೊಂದಲವನ್ನು ಬಗೆಹರಿಸಿತು. ಇದೀಗ ಈ ಸಂಬಂಧ ಆರ್‌ ಅಶೋಕ್ ಅವರು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅದು ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಘಟನೆ ಇರಬಹುದು ಅಥವಾ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ಇರಬಹುದು, ಹೇಗಾದರೂ ಮಾಡಿ ತಪ್ಪಿತಸ್ಥರನ್ನು ರಕ್ಷಣೆ ಮಾಡಲೇ ಬೇಕು ಎಂದು ಹಪಾಹಪಿ ಪಡುತ್ತಿರುವ ಕಾಂಗ್ರೆಸ್ ನಾಯಕರು, ಸುಳ್ಳಿನ ಮೇಲೆ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

FSL ವರದಿ ಬರುವ ಮುನ್ನವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಯೇ ಇಲ್ಲ ದೇಶದ್ರೋಹಿಗಳ ಪರ ವಕಾಲತ್ತು ವಹಿಸಿದ್ದ ಕಾಂಗ್ರೆಸ್ ನಾಯಕರು, ಬಾಂಬ್ ಬ್ಲಾಸ್ಟ್ ಆದ ಕೂಡಲೇ ಅದು ಕುಕ್ಕರ್ ಸ್ಫೋಟ, ಲವ್ ಇಂಟೆನ್ಸಿಟಿ ಬಾಂಬ್, business rivalry ಇಂದ ಮಾಡಿರುವ ಕೃತ್ಯ ಎಂದು ಕಥೆ ಕಟ್ಟಲು ಹೊರಟಿದ್ದರು.

NIA ವಿಚಾರಣೆ ನಡೆಯುತ್ತಿರುವಾಗಲೇ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಈಗ ಹೊಸ ಸುಳ್ಳೊಂದನ್ನು ಹರಿಬಿಟ್ಟಿರುವ ಕಾಂಗ್ರೆಸ್ ಪಕ್ಷ, ಸಾಕ್ಷಿ ವಿಚಾರಣೆಗೂ, ಆರೋಪಿ ವಿಚಾರಣೆಗೂ ವ್ಯತ್ಯಾಸ ತಿಳಿಯದೆ ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನ ಮಾಡುತ್ತಿದೆ.

ವಿಚಾರಣೆ ಪೂರ್ಣವಾಗುವ ಮುನ್ನವೇ ಈ ರೀತಿ ಹೇಳಿಕೆಗಳನ್ನು ನೀಡಿ ದುಂಬಾಲು ಬೀಳುತ್ತಿರುವ ಕಾಂಗ್ರೆಸ್ ನಾಯಕರ ನಡೆ ನೋಡಿದರೆ ಉಗ್ರರನ್ನು ರಕ್ಷಿಸಲು ಹೊರಟಿರುವುದು ಸ್ಪಷ್ಟವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ