ನಾಳೆ ಸುರಾಜ್ಯ ಸಮಾವೇಶ: ರಾಜಕೀಯ ಚದುರಂಗದಲ್ಲಿ ಜಾಣ ನಡೆಯಿಟ್ಟ ಸಿದ್ದರಾಮಯ್ಯ

ಬುಧವಾರ, 26 ಅಕ್ಟೋಬರ್ 2016 (09:48 IST)
ಬೆಂಗಳೂರು: ಚಾತಕ ಪಕ್ಷಿಯಂತೆ ವಿವಿಧ ನಿಗಮ, ಮಂಡಳಿ ಅಧ್ಯಕ್ಷ ಹುದ್ದೆಯ ಕನಸು ಕಾಣುತ್ತಿರುವ ಕಾಂಗ್ರೆಸ್ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರು ಅನಿವಾರ್ಯವಾಗಿ ಇನ್ನು ಒಂದು ದಿನ ಕಾಯಲೇಬೇಕಿದೆ.
 

 
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯಅಂತಿಮ ಪಟ್ಟಿ ತಯಾರಿಸಿ, ಕಾಂಗ್ರೆಸ್ ಹೈ ಕಮಾಂಡ್ ನಿಂದ ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ. ಇನ್ನೇನು ಪಟ್ಟಿಯನ್ನು ಬಹಿರಂಗಪಡಿಸುವುದೊಂದೇ ಬಾಕಿಯಿತ್ತು. ಇಂದು, ನಿನ್ನೆ ಅದು ಪ್ರಕಟವಾಗುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ನಾಳೆ (ದಿ. 27ರಂದು) ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರು ಸುರಾಜ್ಯ ಸಮಾವೇಶ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆಯನ್ನು ಎರಡು ದಿನ ಮುಂದೂಡಲಾಗಿದೆ. ಯಾಕೆಂದರೆ ಪಟ್ಟಿ ಬಿಡುಗಡೆಗೊಳಿಸಿದ ನಂತರ ಸಮಾವೇಶಕ್ಕೆ ತೊಡಕಾದರೆ ಎನ್ನುವ ಅಳುಕು ಸಿದ್ದರಾಮಯ್ಯನವರದ್ದು ಎನ್ನಲಾಗುತ್ತಿದೆ.
 
ಈಗಾಗಲೇ ಕೆಲವು ಅತೃಪ್ತ ಶಾಸಕರು ಒಳಗೊಳಗೆ ಬಂಡಾಯವೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಕೆಲವರು ಸಚಿವರ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ಶಾಸಕತ್ವಕ್ಕೇ ರಾಜೀನಾಮೆ ನೀಡಿ ಹೊರ ಹೋಗಿದ್ದಾರೆ. ಇವುಗಳ ನಡುವೆಯೇ ಸಿದ್ದರಾಂಯ್ಯನವರಿಗೆ ದಲಿತ ವಿರೋಧಿ ಎನ್ನುವ ಪಟ್ಟವನ್ನು ಕಟ್ಟಲಾಗುತ್ತಿದೆ. ಅಲ್ಲದೆ, ಮೂರು ಬಾರಿ ಸಚಿವ ಸಂಪುಟ ವಿಸ್ತರಣೆಯಾದರೂ ಕೆಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನದ ಅವಕಾಶ ಸಿಗದೆ ವಂಚಿತರಾಗಿದ್ದರು. ಸಚಿವ ಸ್ಥಾನ ಸಿಗದಿದ್ದರೇನಂತೆ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನವಾದರೂ ದೊರೆಯಬಹುದೆನ್ನುವ ಲೆಕ್ಕಚಾರದಲ್ಲಿ ಅವರಿದ್ದಾರೆ. ಒಂದು ವೇಳೆ  ಈ ಪಟ್ಟಿಯಲ್ಲೂ ಅವರ ಹೆಸರು ಸೇರ್ಪಡೆಗೊಳ್ಳದೇ ಹೋದರೆ ಒಳಗೊಳಗೇ ಸಣ್ಣಗೆ ಉರಿಯುತ್ತಿರುವ ಕಿಡಿ ಬಹಿರಂಗವಾಗಿ ಸ್ಫೋಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
 
ಪಕ್ಷದೊಳಗಿನ ಕಿತ್ತಾಟ ಹಾಗೂ ವೈಮನಸ್ಸುಗಳ ಸಮಸ್ಯೆಯ ಸವಾಲುಗಳನ್ನು ಇತ್ತೀಚೆಗಿನ ದಿನಗಳಲ್ಲಿ ಸಿದ್ದರಾಮಯ್ಯ ಎದುರಿಸುತ್ತಲೇ ಬಂದಿದ್ದಾರೆ. ಒಬ್ಬರನ್ನು ಸಮಾಧಾನ ಪಡಿಸಿದರೆ ಇನ್ನೊಬ್ಬರಿಗೆ ಅಸಮಧಾನ ಎನ್ನುವಂತ ವಾತಾವರಣ ನಿರ್ಮಾಣವಾಗಿದ್ದು, ಯಾರನ್ನು ಓಲೈಸಬೇಕು, ಯಾರನ್ನು ಕೈ ಬಿಡಬೇಕು ಎಂದು ತಿಳಿಯದೇ ರಾಜಕೀಯದ ಚದುರಂಗದಾಟದಲ್ಲಿ ಸೋತಂತೆ ಕಾಣುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಚಾಕಚಕ್ಯತೆ ರಾಜಕಾರಣಿ ಅವರಲ್ಲ ಎನ್ನುವುದು ಇತ್ತೀಚೆಗಿನ ಕೆಲವು ಘಟನೆ ಸಾಬೀತು ಪಡಿಸುತ್ತವೆ. ಏನೇ ಬಂದರೂ ಎದುರಿಸುತ್ತೇನೆ ಎನ್ನುವ ಹುಂಬುತನ ಅವರದೇ ಪಕ್ಷದ ಹಿರಿಯ ತಲೆಗಳ ವಿರೋಧಕ್ಕೆ ಕಾರಣವಾಗಿದೆ.
 
ಈ ಎಲ್ಲ ಕಾರಣಗಳಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ. ಪರಮೇಶ್ವರ ಅವರ ಸುರಾಜ್ಯ ಸಮಾವೇಶದ ನಂತರ ನಿಗಮ, ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಅಂತಿಮ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ದಲಿತ ಸಿಎಂ ಎನ್ನುವ ಕೂಗು ಹುಟ್ಟಿಕೊಂಡಿದ್ದೇ ಪರಮೇಶ್ವರ ಅವರಿಂದ. ಹಾಗಿದ್ದಾಗ ಈ ಆಯಕಟ್ಟಿನ ಸಂದರ್ಭದಲ್ಲಿ ಮತ್ಯಾಕೆ ವಿವಾದವವನ್ನು ಮೈ-ಮೇಲೆ ಎಳೆದುಕೊಳ್ಳಲಿ ಎನ್ನುವ ಯೋಚನೆ ಮುಖ್ಯಮಂತ್ರಿಗಳದ್ದು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ