ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಅವರಿಂದು 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಾರಾ ಮಹೇಶ್ ಭೂ ಅಕ್ರಮ ಮಾಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಆಡಿಯೊ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ.
ಸಾ.ರಾ ಮಹೇಶ್ ಭೂ ಕಬಳಿಕೆ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ಬಿಂಬಿಸಿದ್ದರು. ಈ ಕಾರಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಆದ ಅನ್ಯಾಯದ ವಿರುದ್ಧ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಆದರೆ ಎಲ್ಲರೂ ಭ್ರಷ್ಟರಲ್ಲ. ಇವರು ಎಲ್ಲರನ್ನೂ ಭ್ರಷ್ಟರೆಂದು ಬಿಂಬಿಸಲು ಯತ್ನಿಸುತ್ತಾರೆ. ಇಂಥವರ ಮುಖವಾಡ ಕಳಚುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಂತರ ಸಾರಾ ಮಹೇಶ್ ಅವರ ಪರ ವಕೀಲ ಅರುಣ್ ಕುಮಾರ್ ಮಾತನಾಡಿ, ಮಾನನಷ್ಟ ಮೊಕದ್ದಮೆ ಹೂಡುವ ಮುನ್ನಾ ರೋಹಿಣಿ ಸಿಂಧೂರಿ ಅವರಿಗೆ ಲೀಗಲ್ ನೋಟಿಸ್ ಕೊಟ್ಟಿದ್ದೆವು.
ನೋಟಿಸ್ಗೆ ರೋಹಿಣಿ ಸಿಂಧೂರಿ ಅವರು ಉತ್ತರ ಕೊಟ್ಟಿದ್ದು, ಸಾರಾ ಮಹೇಶ್ ವಿರುದ್ಧ ಮಾತನಾಡಿರೋ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಇದು ಖಾಸಗಿ ಸಂಭಾಷಣೆ ಎಂದು ಹೇಳಿದ್ದಾರೆ. ಇದೇ ಉತ್ತರದ ಆಧಾರದ ಮೇಲೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ತಿಳಿಸಿದ್ದಾರೆ.