1600 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಕಾಲುವೆ ಆಧುನೀಕರಣ: ಸಿಎಂ ಬೊಮ್ಮಾಯಿ
ಗುರುವಾರ, 19 ಮೇ 2022 (17:47 IST)
ಬೆಂಗಳೂರಿನ ಬೃಹತ್ ಮಳೆ ನೀರು ಕಾಲುವೆ ಗಳನ್ನು (Strom water drain) 1600 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja bommai) ತಿಳಿಸಿದರು.
ಅವರು ಇಂದು ಬೆಂಗಳೂರಿನ (bengaluru) ವಿವಿದೆಡೆ ಮಳೆಯಿಂದ ಹಾನಿಗೊಳದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ಬಾರಿ ಮಳೆಯಾದಾಗ ಎಲ್ಲಾ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಹಲವು ತೀರ್ಮಾನಗಳನ್ನು ಮಾಡಿದ್ದೆವು. ಈ ಪೈಕಿ ಮಳೆ ನೀರು ಕಾಲುವೆಗಳನ್ನು ಅಭಿವೃದ್ಧಿ ಮಾಡುವುದು ಎಂದು ತೀರ್ಮಾನಿಸಲಾಗಿತ್ತು. ಇದಕ್ಕೆ ಡಿಪಿಆರ್ ಸಿದ್ಧವಾಗಿ ಬಜೆಟ್‍ನಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಡಿಪಿಆರ್ ಪೂರ್ಣಗೊಂಡ ಕೂಡಲೆ ಅನುಮೋದನೆ ನೀಡಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
400 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಡಚಣೆಗಳಿರುವಲ್ಲಿ, ಹೂಳು ತುಂಬಿರುವಲ್ಲಿ, ಹಳೆ ಚರಂಡಿಗಳ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಲಾಗಿದೆ. ತುರ್ತಾಗಿ ಹೂಳೆತ್ತುವ ಕೆಲಸ ಆಗಬೇಕಿದೆ. ಮುಖ್ಯ ಚರಂಡಿಯ ಹೂಳೆತ್ತುವ ಕಾರ್ಯವನ್ನು ಸಮಗ್ರವಾಗಿ ಮಾಡಬೇಕು. ಹೆಚ್.ಬಿ.ಆರ್ ಬಡಾವಣೆಯ ಚರಂಡಿಯ ಸುಮಾರು 2.50 ಕಿಮಿ ಹೂಳೆತ್ತಲು ಸೂಚಿಸಲಾಗಿದೆ. ಚರಂಡಿ ಪಕ್ಕದಲ್ಲಿರುವ ವಾರ್ಡ್‍ಗಳಲ್ಲಿ ದ್ವಿತೀಯ ಮತ್ತು ತೃತೀಯ ಚರಂಡಿಗಳನ್ನೂ ಕೂಡ ಹೂಳೆತ್ತಲು ಆದೇಶ ನೀಡಲಾಗಿದೆ. ಮುಖ್ಯ ಚರಂಡಿಗೆ ಸರ್ಕಾರ ಅನುದಾನವನ್ನು ಒದಗಿಸುತ್ತದೆ. ದ್ವಿತೀಯ ಮತ್ತು ತೃತೀಯ ಚರಂಡಿಗಳನ್ನು ಬಿಬಿಎಂಪಿ ಅನುದಾನದಲ್ಲಿ ಸ್ವಚ್ಛ ಮಾಡಲು ಸೂಚಿಸಲಾಗಿದೆ. ಎಸ್.ಟಿ.ಪಿ ಪ್ಲಾಂಟ್ ಸಾಮರ್ಥ್ಯವನ್ನು 40 ಎಂಎಲ್‍ಡಿ ಗೆ ಹೆಚ್ಚಿಸಲು ಸೂಚಿಸಲಾಗಿದೆ. ಬಿಬಿಎಂಪಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಆಗಬೇಕಿದ್ದು, ಸಮೀಕ್ಷೆ ಕಾರ್ಯ, ಅಂದಾಜು, ವಿನ್ಯಾಸಗಳು ,ಅಡಚಣೆಯ ಸ್ಥಳಗಳನ್ನು ಗುರುತಿಸುವ ಮೂಲ ಕೆಲಸಗಳನ್ನು ಮಾಡಲು ಡಿಪಿಆರ್ ಅನುಮೋದನೆಯಾಗಿದ್ದು ಕಾಮಗಾರಿ ಪ್ರಾರಂಭವಾಗುತ್ತದೆ. ರಾಜಕಾಲುವೆ ವ್ಯಾಪ್ತಿಯಲ್ಲಿರುವ ಮನೆಗಳನ್ನುತೆರವುಗೊಳಿಸಬೇಕಿದೆ. ಭಾರಿ ಪ್ರಮಾಣದ ಮಳೆಯಿಂದ 300 ಅಡಿಯ ರಾಜಕಾಲುವೆಯನ್ನೂ ಮೀರಿ ನೀರು ಹರಿದಿದೆ. ಈ ಕಾಲುವೆಗಳು ಹಳೆಯದಾಗಿದ್ದು, ಇಷ್ಟು ದೊಡ್ಡ ಪ್ರಮಾಣದ ಮಳೆನೀರು ಮತ್ತು ಚರಂಡಿ ನೀರನ್ನು ತಡೆಯಲು ಸಾಧ್ಯವಾಗುವುದಿಲ್ಲ. ರಾಜಕಾಲುವೆಗಳನ್ನು ದೊಡ್ಡದು ಮಾಡುವ ಕೆಲಸವಾಗಬೇಕು. ಎಸ್‍ಟಿಪಿ ಘಟಕಗಳನ್ನು ಹೆಚ್ಚಿಸಲಾಗುವುದು. ಮಳೆ ನೀರು ಕಾಲುವೆಗಳಿಗೆ ಎಸ್‍ಟಿಪಿ ಘಟಕಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.