ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 18 ಭಕ್ತರು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಶನಿವಾರ, 15 ಡಿಸೆಂಬರ್ 2018 (07:17 IST)
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ ಪರಿಣಾಮ 18 ಭಕ್ತರು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.


ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಶುಕ್ರವಾರ ನಡೆದಿತ್ತು. ವಿವಿಧ ಪೂಜಾ ಕಾರ್ಯಗಳು ಮುಗಿದ ಬಳಿಕ ಮಧ್ಯಾಹ್ನ ಭಕ್ತರಿಗೆ ಪ್ರಸಾದ (ರೈಸ್‍ಬಾತ್) ವ್ಯವಸ್ಥೆ ಮಾಡಲಾಗಿತ್ತು. ಸುಳ್ವಾಡಿ ಸುತ್ತಮುತ್ತಲಿನ ಅನೇಕ ಗ್ರಾಮದ ಜನರು ದೇವಿಯ ದರ್ಶನಕ್ಕೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಂಕುಸ್ಥಾಪನೆ ಬಳಿಕ ಪ್ರಸಾದ ಸೇವಿಸಿದ ಭಕ್ತರು ವಾಂತಿ ಮಾಡಿಕೊಂಡು ದೇವಸ್ಥಾನದ ಆವರಣದಲ್ಲಿಯೇ ವಿಲವಿಲ ಒದ್ದಾಡಿದ್ದಾರೆ. ವೃದ್ಧರು, 20ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದರು. ತಕ್ಷಣವೇ ಕೊಳ್ಳೇಗಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಕೆಲವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಸಾಗಿಸಲಾಯಿತು.


ಇದೀಗ ಈ ಘಟನೆಯಲ್ಲಿ ಮೃತರ ಸಂಖ್ಯೆ 18 ಕ್ಕೆ ಏರಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.  ಇನ್ನು ದೇವಸ್ಥಾನದ ಆವರಣದಲ್ಲಿ ಹಾಕಿದ್ದ ವಿಷಯುಕ್ತ ಆಹಾರ ಸೇವಿಸಿದ್ದ 60ಕ್ಕೂ ಹೆಚ್ಚು ಕಾಗೆಗಳು ಹಾಗೂ ಗೊರವಂಕಗಳು ವಿಲವಿಲ ಒದ್ದಾಡಿ ಪ್ರಾಣಬಿಟ್ಟಿದ್ದಾವೆ. ಅಸ್ವಸ್ಥರ ಗುಣಲಕ್ಷಣಗಳನ್ನು ನೋಡಿದರೇ, ಆಹಾರದಲ್ಲಿ ಕೀಟನಾಶಕ ಬೆರೆತಿರುವ ಸಂಶಯವನ್ನು ವೈದ್ಯರು  ವ್ಯಕ್ತಪಡಿಸಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಪ್ರಸಾದ ತಯಾರಿಸಿದ ಮೂವರು ಬಾಣಸಿಗರನ್ನು ರಾಮಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಿಎಂ ಹೆಚ್.ಡಿ ಕುಮಾರ ಸ್ವಾಮಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಘಟನೆ ಯಲ್ಲಿ ಮೃತಪಟ್ಟ ಹಾಗೂ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ. ಹಾಗೂ ಸಾವನಪ್ಪಿರುವವರಿಗೆ 5 ಲಕ್ಷ ಪರಿಹಾರವನ್ನು ನೀಡಲಾಗುವುದು ಅಂಥ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ