ಶಿವಮೊಗ್ಗ : ಮಲೆನಾಡಿನ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 4ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸಾಗರ ತಾಲೂಕಿಗೆ 89, ಹೊಸನಗರಕ್ಕೆ 35, ತೀರ್ಥಹಳ್ಳಿಗೆ 27, ಶಿವಮೊಗ್ಗಕ್ಕೆ 18, ಶಿಕಾರಿಪುರಕ್ಕೆ 13, ಭದ್ರಾವತಿ ಹಾಗೂ ಸೊರಬ ತಾಲೂಕಿಗೆ ತಲಾ 8 ಮತ್ತು ಬೈಂದೂರಿಗೆ 25 ಟವರ್ಗಳು ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಮೂರು ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ 112 ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ಸ್ಥಾಪನೆಗೆ ಅನುಮತಿ ದೊರಕಿದೆ. ಈಗಾಗಲೇ ಬಿಎಸ್ಎನ್ಎಲ್ ಸಂಸ್ಥೆಯು ಟವರ್ ಸ್ಥಾಪನೆಗೆ ಸೂಕ್ತ ಜಾಗಗಳ ಗುರುತಿಸಲಾಗಿದೆ. ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.