ಬೆಂಗಳೂರು : ಸಚಿವ ರಾಜಣ್ಣ ಅವರ 3 ಡಿಸಿಎಂ ಹುದ್ದೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಡ್ತಾರೆ ಅಂತ ಡಿಕೆ ಶಿವಕುಮಾರ್, ರಾಜಣ್ಣ ಹೇಳಿಕೆಗೆ ಆಕ್ರೋಶ ಹೊರ ಹಾಕಿದ್ದಾರೆ.
ಸಚಿವ ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಚಿವ ರಾಜಣ್ಣ ಹೇಳಿಕೆ ಹಾಗೂ ಪರಮೇಶ್ವರ್ ಸ್ವಾಗತ ಮಾಡಿರೋದು ಬಹಳ ಸಂತೋಷ. ಎಲ್ಲಾ ವಿಘ್ನಕ್ಕೆ ನಾಯಕ ವಿನಾಯಕ. ಎಲ್ಲರ ಮನಸ್ಸಿಗೆ ಸಮಾಧಾನವಾಗಲಿ ಅಂತ ಅಸಮಾಧಾನ ಹೊರಹಾಕಿದ್ರು.
ನನ್ನನ್ನ ನೇಮಕ ಮಾಡಿರೋದು ಸಿಎಂ, ರಾಜ್ಯಪಾಲರ ಅಡ್ವೈಸ್ ಮೇಲೆ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಇದಕ್ಕೆಲ್ಲ ಉತ್ತರ ಕೊಡ್ತಾರೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಡಿಸಿಎಂ ಹೇಳಿಕೆ ಯಾಕೆ ಅಂತ ನಮಗೆ ಗೊತ್ತಿಲ್ಲ. ಯಾಕೆ ಅಂತ ನೀವು ರಾಜಣ್ಣ ಅವರನ್ನ ಕೇಳಬೇಕು. ಇಲ್ಲವೇ ಸಿಎಂ ಅವರನ್ನ ಕೇಳಬೇಕು. ನಾವೆಲ್ಲ ಸಿಎಂ ಕೆಳಗಡೆ ಕೆಲಸ ಮಾಡ್ತಿದ್ದೇವೆ ಅವರೇ ಉತ್ತರ ಕೊಡ್ತಾರೆ ಎಂದರು.
ಇನ್ನೂ ಸಿದ್ದರಾಮಯ್ಯ ಬಣದ ಆಪ್ತರಿಂದ ಡಿಕೆ ವಿರುದ್ಧ ಡಿಸಿಎಂ ಕಾರ್ಡ್ ಪ್ಲೇ ಮಾಡ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತಿಗೂ ಬಣ ರಾಜಕೀಯ ಮಾಡಿಲ್ಲ. ನಾನು ಬಣ ರಾಜಕೀಯಕ್ಕೆ ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಬಣ ಮಾಡಬೇಕಿದ್ದರೆ ಎಸ್.ಎಂ ಕೃಷ್ಣ ಕಾಲದಲ್ಲಿ, ಬಂಗಾರಪ್ಪ ಕಾಲದಲ್ಲಿ ಮಾಡ್ತಿದ್ದೆ. ನನ್ನದು ಒಂದೇ ಒಂದು ಬಣ ಕಾಂಗ್ರೆಸ್ ಬಣ ಎಂದು ಸ್ಪಷ್ಟಪಡಿಸಿದ್ದಾರೆ.