ಫಿಲ್ಮ್ ಅವಾರ್ಡ್ : ಲೋಗೋ ಲಾಂಚ್ ಮಾಡಿದ ಸಿಎಂ ಸಿದ್ದರಾಮಯ್ಯ

ಭಾನುವಾರ, 17 ಸೆಪ್ಟಂಬರ್ 2023 (13:51 IST)
ತೆಲುಗು ಸಿನಿಮಾ ರಂಗದಲ್ಲಿ ಅನನ್ಯ ಸೇವೆಗೈದ ಸಾಧಕರಿಗೆ ಕೊಡ ಮಾಡುವ ನಂದಿ ಪ್ರಶಸ್ತಿ ಈಗ ಕನ್ನಡದಲ್ಲಿಯೂ ಪ್ರಾರಂಭವಾಗುತ್ತಿದೆ. ಅದರ ಮೊದಲ ಭಾಗ ಎನ್ನುವಂತೆ ನಂದಿ ಅವಾರ್ಡ್ ಲೋಗೋ ಬಿಡುಗಡೆ ಮಾಡಲಾಗಿದೆ. ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಗೋ ಲಾಂಚ್ ಮಾಡಿ ಶುಭ ಕೋರಿದ್ದಾರೆ.
 
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ನೇತೃತ್ವದಲ್ಲಿ ನಿನ್ನೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಲೋಗೋ ಅನಾವರಣ ಮಾಡಿಸಿದ್ದಾರೆ. ಅನಿತಾ ರೆಡ್ಡಿ, ನಿತ್ಯನಂದ ಪ್ರಭು, ಪದ್ಮವತಿ ಚಂದ್ರಶೇಖರ್, ಭಾಮಾ ಗಿರೀಶ್, Aiplex ಗಿರೀಶ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

‘ನಂದಿ ಕನ್ನಡದ ಹೆಮ್ಮೆ. ಈ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕೆಂದು ಸಿನಿಮಾ ರಂಗದ ಸ್ನೇಹಿತರೊಟ್ಟಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ’ ಎಂದು ಅಧ್ಯಕ್ಷ ಭಾ.ಮಾ.ಹರೀಶ್ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಪ್ರತಿ ವರ್ಷ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸನ್ಮಾನಿಸಿ ನಂದಿ ಪ್ರಶಸ್ತಿ ನೀಡಲಾಗುತ್ತದೆ.

ಸದ್ಯ ನಂದಿ ಪ್ರಶಸ್ತಿ ಲೋಗೋ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪರೇಷೆಗಳನ್ನು ತಿಳಿಸಲಾಗುತ್ತದೆ. ಸೈಮಾ, ಫಿಲ್ಮಂ ಫೇರ್ ಮಾದರಿಯಲ್ಲಿಯೇ ಕನ್ನಡ ಸಿನಿಮಾರಂಗಕ್ಕೆ ಪ್ರತ್ಯಕ್ಷ ಪ್ರಶಸ್ತಿ ನಂದಿ ಎಂದು ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ