ಬೆಂಗಳೂರು : ವಿಶ್ವದ ಮುಂಚೂಣಿಯ ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್ಕಾನ್) ಕಂಪನಿಯು ರಾಜ್ಯದಲ್ಲಿ ಗಣನೀಯ ಗಾತ್ರದ ಹೂಡಿಕೆ ಮಾಡಲು ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದರಿಂದ ರಾಜ್ಯದಲ್ಲಿ 1 ಲಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆ ಇದ್ದು, ಉದ್ಯಮ ಸ್ಥಾಪನೆಗಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳಲ್ಲಿ 300 ಎಕರೆ ಭೂಮಿ ಗುರುತಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವು ಫಾಕ್ಸ್ಕಾನ್ಗೆ ಎಲ್ಲಾ ರೀತಿಯ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು. ಅತ್ಯಾಧುನಿಕ ತಂತ್ರಜ್ಞಾನಗಳ ಪರಿಣತಿಗೆ ಹೆಸರಾದ ಕಂಪೆನಿ ಫಾಕ್ಸ್ಕಾನ್ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವುದು ಸಂತಸ ತಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ.
ಐಟಿಐಗಳನ್ನು ಇತ್ತೀಚೆಗಷ್ಟೇ ಉನ್ನತೀಕರಿಸಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಅಂತೆಯೇ ಜಿ.ಟಿ.ಟಿ.ಸಿ, ಪಾಲಿಟೆಕ್ನಿಕ್ ಗಳು ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಅತ್ಯುತ್ತಮ ತಾಂತ್ರಿಕ ಶಿಕ್ಷಣವನ್ನು ನೀಡುವ ಮೂಲಕ ಕೌಶಲ್ಯಯುತ ಮಾನವ ಸಂಪನ್ಮೂಲ ಸೃಜಿಸಲಾಗುತ್ತಿದೆ ಎಂದು ವಿವರಿಸಿದರು.