ಬೆಂಗಳೂರು : ಕರ್ನಾಟಕಕ್ಕೆ ಭಾರತ್ ಮಾಲಾ ಯೋಜನೆ ಮೂಲಕ 55 ಸಾವಿರ ಕೋಟಿ ಅನುದಾನ ಕೊಡುವ ಉದ್ದೇಶವಿದೆ ಎಂದು ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಘಟಕದಿಂದ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ, ಭೋಗನಂದೀಶ್ವರ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಶ್ವೇಶ್ವರಯ್ಯ, ಪ್ರವೀಣ್ ನೆಟ್ಟಾರು ಮುಂತಾದವರನ್ನು ಸ್ಮರಿಸಿದರು.
ಈ ಸಮಾವೇಶ ಈ ಪುಣ್ಯ ಭೂಮಿಯಲ್ಲಿ ನಡೆಯುತ್ತಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಏಕೆಂದರೆ ಇದು ಸಂಗ್ರಾಮದ ವೇದಿಕೆ ಎಂದು ನುಡಿದಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ, ಕಾಂಗ್ರೆಸ್ ಪಕ್ಷಪಾತದ ಸರ್ಕಾರ ಆಗಿತ್ತು. ಹಾಗಾಗಿ ಕಾಂಗ್ರೆಸ್ ಇದ್ದಾಗ ಜನರಿಗೆ ತಾರತಮ್ಯ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಕರ್ನಾಟಕಕ್ಕೆ ಹಣಕಾಸು ಆಯೋಗದ ಮೂಲಕ ಕೊಟ್ಟಿದ್ದು ಕೇವಲ 2 ಸಾವಿರ ಕೋಟಿ. ಆದರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ.
ನಮ್ಮ ಕೇಂದ್ರ ಸರ್ಕಾರ ಈಗ ರಾಜ್ಯಕ್ಕೆ ಹಣಕಾಸು ಆಯೋಗದಿಂದ 5 ಸಾವಿರ ಕೋಟಿ ಅನುದಾನ ಕೊಟ್ಟಿದೆ. ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿಗೆ 9,700 ಕೋಟಿ ರೂ. ಅನುದಾನ ಕೊಟ್ಟಿದೆ.