ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕಿ: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ಶನಿವಾರ, 22 ಏಪ್ರಿಲ್ 2017 (23:18 IST)
ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಝಂಜರವಾಡ ಗ್ರಾಮದಲ್ಲಿ 6 ವರ್ಷದ ಬಾಲಕಿ ತೆರೆದ ಕೊಳವೆಬಾವಿಗೆ ಬಿದ್ದಿದ್ದಾಳೆ. ಬಾಲಕಿಯನ್ನ ಕಾವೇರಿ ಅಜಿತ್ ಮಾದರ ಎಂದು ಗುರ್ತಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸಂಜೆ 5.30ರ ಸುಮಾರಿಗೆ ಹೊಲದ ಪಕ್ಕದಲ್ಲಿ ಮಗುವನ್ನ ಆಡಲು ಬಿಟ್ಟು ತಾಯಿ ಸವಿತಾ ಸೌದೆ ತರಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಮಗು ಕೊಳವೆ ಬಾವಿಗೆ ಬಿದ್ದದ್ದನ್ನ ಗಮನಿಸಿದ ತಾಯಿ ಹಗ್ಗದ ಮೂಲಕ ಮೇಲೆತ್ತಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ಜಿಲ್ಲಾಡಳಿತದಿಂದ 10 ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮಣ್ಣು ಕುಸಿಯದಂತೆ ಕೇಸಿಂಗ್ ಪೈಪ್ ಸಹ ಅಳವಡಿಸಲಾಗಿದೆ. ಸ್ಥಳದಲ್ಲೇ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಪುಣೆಯಿಂದ ಎನ್`ಡಿಆರ್`ಎಫ್ ಪಡೆ ಕೂಡ ಆಗಮಿಸಲಿದೆ.
ಬಾಗಲಕೋಟೆಯ ಜಮಖಂಡಿ ಮೂಲದ ಶಂಕರ ಹಿಪ್ಪರಗಿ ಎಂಬುವವರ ಹೊಲದ ಕೊಳವೆಬಾವಿ ಇದಾಗಿದ್ದು, ಕೊಳವೆಬಾವಿ ಕೊರೆಸಿ ಹಲವು ದಿನಗಳೇ ಕಳೆದಿದ್ದರೂ ಅದನ್ನ ಮುಚ್ಚಿರಲಿಲ್ಲ. ನೀರು ಸಿಗದ ಕೊಳವೆಬಾವಿಯನ್ನ ಕೂಡಲೆ ಮುಚ್ಚಬೇಕೆಂದು ಸರ್ಕಾರದ ಾದೇಶವಿದ್ದರೂ ಮಾಲೀಕರು ಮಾತ್ರ ನಿರ್ಲಕ್ಷ್ಯ ವಹಿಸುತ್ತಿರುವುದು ಇಂತಹ ದುರಂತಗಳಿಗೆ ಎಡೆಮಾಡಿಕೊಡುತ್ತಿದೆ.