ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ, ಜನಜೀವನ ಸ್ತಬ್ಧ, ಬಸ್ ಸಂಚಾರ ಸ್ಥಗಿತ

ಶುಕ್ರವಾರ, 9 ಸೆಪ್ಟಂಬರ್ 2016 (10:28 IST)
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್‌‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಜನಜೀವನ, ಬಸ್ ಸಂಚಾರ ಸ್ತಬ್ಧಗೊಂಡಿದೆ. ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮಾಲೀಕರು ಬಂದ್ ಮಾಡಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು, ರಾಮನಗರ, ಕೋಲಾರ, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಶಿವಮೊಗ್ಗ, ಗದಗ ಎಲ್ಲೆಡೆಯೂ ಬಂದ್ ಬಿಸಿ ತಟ್ಟಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ.

ಈ ನಡುವೆ ಬಂದ್‌ಗೆ ಸಹಕರಿಸದೇ ಕೆಲಸ ಮಾಡಿದ ಬೆಂಗಳೂರಿನ ನಾಗವಾರದ ಬಳಿಯಿರುವ ಮಾನ್ಯತಾ ಟೆಕ್ ಪಾರ್ಕ್ ಎದುರು ಕನ್ನಡ ಪರ ಸಂಘಟನೆಗಳು ಘೋಷಣೆ ಕೂಗಿದವು. ಮೈಸೂರಿನ ಇನ್ಫೋಸಿಸ್ ಕಂಪೆನಿ ಎದುರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಇಡೀ ಕನ್ನಡ ಚಿತ್ರರಂಗ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ನೆರೆದಿದ್ದಾರೆ. ಮೈಸೂರಿನಲ್ಲಿ ಜಯಲಲಿತಾ ಅಣಕು ಶವಯಾತ್ರೆ ನಡೆಸಿ ಜನರು ಧಿಕ್ಕಾರ ಕೂಗಿದರು. ಜಯಾ ಭಾವಚಿತ್ರಕ್ಕೆ ಪ್ರತಿಭಟನೆಕಾರರು ಚಪ್ಪಲಿ ಸೇವೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ