ಕೊಪ್ಪಳ : ನಾನು ಷರಿಯತ್ ಪ್ರಕಾರ ಬೇರೆ ಮದುವೆಯಾಗುತ್ತೇನೆ. ನಿನಗೆ ತಲಾಕ್ ಕೊಡುತ್ತೇನೆ. ನಿನಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪತ್ನಿಗೆ ಹೇಳಿ ಹೋದಾತನ ವಿರುದ್ಧ ತ್ರಿವಳಿ ತಲಾಕ್ ಕೇಸ್ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯರ ಮದುವೆಯ ರಕ್ಷಣೆ ಕಾಯ್ದೆಯಡಿ ಖಾಜೀದಾ ಬೇಗಂ ಗಂಡನ ವಿರುದ್ಧ ತ್ರಿವಳಿ ತಲಾಕ್ನಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪತಿ ಹಾಗೂ ಅವರ ಮನೆಯವರ ಮೇಲೆ ದೂರು ದಾಖಲಾಗಿ ಕೋರ್ಟ್ನಲ್ಲಿ ವಿಚಾರಣೆಯಲ್ಲಿತ್ತು. ಖಾಜೀದಾ ಬೇಗಂ ಅವರು ಕೊಪ್ಪಳದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಗಂಡನ ವಿರುದ್ಧ ಡೊಮೆಸ್ಟಿಕ್ ವೈಲೆನ್ಸ್ ಪ್ರಕರಣ ದಾಖಲು ಮಾಡಿದ್ದರ ಕುರಿತಂತೆ ಸೆ.15 ರಂದು ವಿಚಾರಣೆ ನಡೆಯುತ್ತಿತ್ತು.
ಖಾಜೀದಾ ಬೇಗಂ ತನ್ನ ತಂದೆಯೊಂದಿಗೆ ಕೋರ್ಟ್ಗೆ ಆಗಮಿಸಿದ್ದ ವೇಳೆ ಕೋರ್ಟ್ ಗೇಟ್ ಬಳಿ ಪತಿ ಸೈಯದ್ ವಾಹೀದ್ ಆತ್ತಾರ್ ತಡೆದು ನಿಲ್ಲಿಸಿ ನಾನು ಷರಿಯತ್ ಪ್ರಕಾರ ಬೇರೆ ಮದುವೆಯಾಗುತ್ತೇನೆ. ನಿನಗೆ ತಲಾಕ್ ಕೊಡುತ್ತೇನೆ. ನಿನಗೂ ನನಗೂ ಯಾವುದೇ ಸಂಬಂಧವಿಲ್ಲ.
ನನ್ನ ತಂಟೆಗೆ ಬಂದರೆ ಸಾಯಿಸಿ ಬಿಡುತ್ತೇನೆ ಎಂದು ಹೇಳಿ ಮೂರು ಬಾರಿ ತಲಾಕ್ ಶಬ್ದ ಹೇಳಿ ಹೋಗಿರುವ ಕುರಿತು ಖಾಲೀದಾ ಬೇಗಂ, ಸೈಯದ್ ವಾಹೀದ್ ಮೇಲೆ ಸೆ.18 ರಂದು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯರ ಮದುವೆಯ ರಕ್ಷಣೆ ಕಾಯ್ದೆಯಡಿಯಲ್ಲಿ ತ್ರಿವಳಿ ತಲಾಕ್ ಪ್ರಕರಣ ದಾಖಲಿಸಿದ್ದಾರೆ.