ವಿಶಿಷ್ಟ ಜಾತ್ರೆ: ದೇವರಿಗೆ ಸಿಗರೇಟ್ ಆರತಿ, ಮದ್ಯದಭಿಷೇಕ

ಸೋಮವಾರ, 6 ಮಾರ್ಚ್ 2017 (08:44 IST)
ದೇವರಿಗೆ ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ದೇವರಿಗೆ ಮದ್ಯ, ಸಿಗರೇಟ್ ಅರ್ಪಿಸುವುದನ್ನು ನೋಡಿರುತ್ತೀರಾ? ಹೌದು ಇದು ಸತ್ಯ. ಇಂತಹ ವಿಶಿಷ್ಟ ಜಾತ್ರೆಯೊಂದು ಉತ್ತರ ಕನ್ನಡದ ಕಾರವಾರದ ಕೋಡಿಬಾಗ್‌ನಲ್ಲಿ ನಡೆಯುತ್ತದೆ. ಅಲ್ಲಿನ ಆರಾಧ್ಯ ದೈವ 'ಖಾಪ್ರಿ'ಗೆ ಸಿಗರೇಟ್ ಆರತಿ ಬೆಳಗಿ, ಮದ್ಯದಭಿಷೇಕ ಮಾಡಿ ಕೋಳಿ ಮಾಂಸವನ್ನು ಅರ್ಪಿಸುತ್ತಾರೆ.
ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆ ಈ ಬಾರಿ ಮಾರ್ಚ್ 5 ರಂದು ವೈಭವೋಪೇತವಾಗಿ ನಡೆಯಿತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಕ್ತಿದೇವತೆ ಎಂದು ಪ್ರಸಿದ್ಧನಾಗಿರುವ ಖಾಪ್ರಿ ದೇವರಿಗೆ ಹರಕೆ ಒಪ್ಪಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಸ್ಥಳೀಯರು, ಪಕ್ಕದ ಗೋವಾ, ಮಹಾರಾಷ್ಟ್ರದ ಜನರು ಬಂದು ನಿನ್ನೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಕೇವಲ ಹಿಂದೂಗಳಷ್ಟೇ ಅಲ್ಲ ಅನ್ಯ ಧರ್ಮೀಯರು ಸಹ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಕ್ರಿಶ್ಚಿಯನ್ನರು ಮೇಣದಬತ್ತಿ ಹತ್ತಿ ಖಾಪ್ರಿ ದೇವರನ್ನು ಆರಾಧಿಸುತ್ತಾರೆ.
 
ಪೌರಾಣಿಕ ಹಿನ್ನೆಲೆ: ಮೂಲತಃ ದಕ್ಷಿಣ ಆಫ್ರಿಕಾದ ವ್ಯಕ್ತಿಯೋರ್ವ ಖಾಪ್ರಿ ದೇವರನ್ನು ಕೋಡಿಬಾಗದಲ್ಲಿ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದ. ಕೆಲ ಕಾಲದ ನಂತರ ಆತ ಇದಕ್ಕಿದ್ದಂತೆ ಕಾಣೆಯಾದ. ಆತ ಎಲ್ಲಿಗೆ ಹೋದ, ಏಕೆ ಹೋದ ಎಂದು ಯಾರಿಗೂ ತಿಳಿಯಲಿಲ್ಲ.
 
ಕೆಲ ದಿನದ ನಂತರ ಪರೆಸಪ್ಪ ಮನೆತನದವರಿಗೊಂದು (ದೇವಸ್ಥಾನದ ಅರ್ಚಕರು) . ಅದರಲ್ಲಿ ದೇವರ ಮೂರ್ತಿಯೊಂದು ಕಾಣಿಸಿಕೊಂಡು ನನಗೆ ಗುಡಿ ಕಟ್ಟಿ ಪೂಜೆ ಸಲ್ಲಿಸಿ. ಸಿಗರೇಟ್, ಮದ್ಯ, ಕೋಳಿ ಮಾಂಸ ಅರ್ಪಿಸಿ. ನಾನು ಭಕ್ತರ ಇಷ್ಟಾರ್ಥ ಪೂರೈಸುತ್ತೇನೆ ಎಂದು ಹೇಳಿದಂತಾಯಿತು.
 
ರಾತ್ರಿ ಕಂಡ ಕನಸಿನಂತೆ ಪರೆಸಪ್ಪ ಮನೆತನದ ಆ ವ್ಯಕ್ತಿಗೆ ಕಾಳಿ ನದಿ ತೀರದಲ್ಲಿ ಕಲ್ಲಿನ ಮೂರ್ತಿಯೊಂದು ದೊರಕಿತು. ಆ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ವರ್ಷಕ್ಕೊಮ್ಮೆ ಖಾಪ್ರಿ ದೇವರ ಜಾತ್ರೆ ನಡೆಯುತ್ತದೆ. ಖಾಪ್ರಿ ಅವರಿಗೆ ಸಿಗರೇಟ್, ಸಾರಾಯಿ ಹಾಗೂ ಕೋಳಿ ಮಾಂಸ ಇಷ್ಟವಾಗಿತ್ತು. ಆ ಕಾರಣದಿಂದ ಭಕ್ತರು ಈ ಎಲ್ಲ ವಸ್ತುಗಳಿಂದ ಹರಕೆ ತೀರಿಸುತ್ತಾರೆ. ಕೆಲವರು ದೇವಾಲಯದ ಹೊರಗೆ ಮೇಣದ ಬತ್ತಿಯನ್ನು ಬೆಳಗಿಸುತ್ತಾರೆ. ಪ್ರತಿ ಬುಧವಾರ ಹಾಗೂ ಭಾನುವಾರ ಖಾಪ್ರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
 

ವೆಬ್ದುನಿಯಾವನ್ನು ಓದಿ