ಬೆಂಗಳೂರು : ಮೋಡ ಕವಿದ ವಾತಾವರಣ ಇರೋದ್ರಿಂದ ಬೆಂಗಳೂರಿನಲ್ಲಿ ಹಸಿರು ಧೂಮಕೇತುವಿನ ಗೋಚರ ಸಾಧ್ಯವಾಗಿಲ್ಲ.
ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಹಸಿರು ಧೂಮಕೇತು ಗೋಚರವಾಗಬೇಕಿತ್ತು. ಆದ್ರೆ ಬೆಂಗಳೂರಿನಲ್ಲಿ ದಟ್ಟವಾದ ಮೋಡ ಇರುವುದರಿಂದ ಹಸಿರು ಧೂಮಕೇತು ಕಣ್ತುಂಬಿಕೊಳ್ಳಲು ಆಗಲಿಲ್ಲ.
ಸುಮಾರು 50 ಸಾವಿರ ವರ್ಷಗಳ ಹಿಂದೆ ಅಂದ್ರೆ ಶಿಲಾ ಯುಗದ ಸಂದರ್ಭದಲ್ಲಿ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ಹಸಿರು ಧೂಮಕೇತು ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬಂದಿದೆ. ಆಕಾಶದಲ್ಲಿ ಸಂಭವಿಸುವ ಕೌತುಕವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು ಎಂದು ನಾಸಾ ತಿಳಿಸಿದೆ. ಉತ್ತರ ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲದ ಮಧ್ಯೆ ಇದು ಕಂಡುಬರಲಿದೆ.
ಭೂಮಿಗೆ 42 ಮಿಲಿಯನ್ ಕಿ.ಮೀ. ನಷ್ಟು ಸನಿಹಕ್ಕೆ ಈ ಗ್ರೀನ್ ಕಾಮೆಟ್ ಬರಲಿದೆ. ಆದ್ರೆ ಭಾರತದಲ್ಲಿ ಇದು ಬರಿಗಣ್ಣಿಗೆ ಕಾಣುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಬೈನಾಕುಲರ್ ಮೂಲಕ ಇದನ್ನು ವೀಕ್ಷಣೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.