ನಂಜನಗೂಡು : ಶಾಲೆಗೆ ಹೋಗುವಾಗ, ಬರುವಾಗ ಯುವಕನೊರ್ವ ಚುಡಾಯಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಪರಿಣಾಮ, ಆತನ ಕಿರುಕುಳದಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಂಚಹಳ್ಳಿಹುಂಡಿ ಗ್ರಾಮದಲ್ಲಿ ಜರುಗಿದೆ. ಬಂಚಹಳ್ಳಿಹುಂಡಿ ಗ್ರಾಮದ ರಮೇಶ್ ಎಂಬವರ ಪುತ್ರಿ ಚಂದನಾ (15) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಚಂದನಾ ತಾಂಡವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು. ಬಂಚಹಳ್ಳಿಹುಂಡಿ ಗ್ರಾಮದ ವೆಂಕಟೇಶ್ ಎಂಬವರ ಪುತ್ರ ಶರತ್ ಎಂಬಾತ ಶಾಲೆಗೆ ಹೋಗುವಾಗ, ಬರುವಾಗ ಹಿಂಬಾಲಿಸಿಕೊಂಡು ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಚಂದನಾ ತನ್ನ ತಂದೆ ರಮೇಶ್ ಅವರಿಗೆ ವಿಷಯ ತಿಳಿಸಿದ್ದಳು. ರಮೇಶ್ ಆರೋಪಿ ವೆಂಕಟೇಶನಿಗೆ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ.
ಆ ನಂತರವೂ ಸಹ ವಿದ್ಯಾರ್ಥಿನಿಯನ್ನು ಚುಡಾಯಿಸುವುದನ್ನು ಮುಂದುವರೆಸಿದ್ದ ಕಾರಣ ರಮೇಶ್ ತನ್ನ ಮಗಳನ್ನು ಶಾಲೆಯಿಂದ ಬಿಡಿಸಿ ಮನೆಯಲ್ಲಿಯೇ ಉಳಿಸಿಕೊಂಡಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಚಂದನಾ ಶುಕ್ರವಾರ ಬೆಳಗ್ಗೆ ಮನೆಯ ತೀರಿಗೆ ತನ್ನ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.